ದಾವಣಗೆರೆ.ಸೆ.17 (Davanagere): ಜಮೀನು ವಿವಾದದಿಂದ ಕೋಪಗೊಂಡು ತನ್ನ ತಂದೆಯ ಸಹೋದರನ್ನು ಕೊಲೆ ಮಾಡಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿ 01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷಗಳ ನಂತರ ತೀರ್ಪು ನೀಡಿದೆ.
ದಾವಣಗೆರೆ ತಾಲೂಕಿನ ಗಿರಿಯಾಪುರದ ರುದ್ರೇಶ್ (28) ಶಿಕ್ಷೆಗೆ ಗುರಿಯಾದ ಯುವಕ. ಗಿರಿಯಾಪುರದ ಪರಶುರಾಮಪ್ಪ ಮತ್ತು ತಿಪ್ಪಣ್ಣ ಅಣ್ಣತಂಮ್ಮದಿರು. ಇಬ್ಬರ ಮಧ್ಯೆ ಜಮೀನಿನ ವಿಚಾರವಾಗಿ 15 ವರ್ಷಗಳಿಂದ ಜಗಳ ನಡೆಯುತಿತ್ತು. ಪರಶುರಾಮಪ್ಪ 13.08.2016 ರಂದು ಗಿರಿಯಾಪುರದಿಂದ ಹದಡಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪೂಜೆಗೆ ಹೋಗಿ ಬೈಕ್‍ನಲ್ಲಿ ಆರನೇಕಲ್ಲು ಗ್ರಾಮದ ಹತ್ತಿರ ಬರುತ್ತಿದ್ದಾಗ, ತಿಪ್ಪಣ್ಣನ ಮಗ ರುದ್ರೇಶ ಅಕ್ರಮ ಗುಂಪುಕಟ್ಟಿಕೊಂಡು ಕೆಎ-17, ಸಿ-6918 ನೇ ಕಾರಿನಲ್ಲಿ ಬಂದು ಹಿಂದುಗಡೆಯಿಂದ ಮೃತ ಪರಶುರಾಮನ ಬೈಕ್‍ಗೆ ಡಿಕ್ಕಿಪಡಿಸಿ ಕೆಳಗೆ ಬೀಳಿಸಿ ನಂತರ ಇತರೆ ಆರೋಪಿತರ ಕುಮ್ಮಕ್ಕಿನಿಂದ ಮಚ್ಚಿನಿಂದ ತಲೆ, ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದನು.
Read also : Davanagere | ಮನೆ,ಪರಿಸರದ ಶುಚಿತ್ವ ಅಗತ್ಯ : ಸುರೇಶ್ ಬಿ.ಇಟ್ನಾಳ್
ಈ ಕುರಿತು ಮೃತನ ಪತ್ನಿ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದರಿ ಪ್ರಕರಣದಲ್ಲಿ ತನಿಖಾಧಿಕಾರಿ ಸಿಪಿಐ ಎನ್.ಮಂಜುನಾಥ್ ತನಿಖೆ ನಡೆಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ಸುದೀರ್ಘ 8 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದಿದ್ದು, 01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಅವರು ರುದ್ರೇಶನ ಮೇಲಿನ ಆರೋಪ ಸಾಬಿತಾದ ಹಿನ್ನೆಲೆಯಲ್ಲಿ ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪಿರ್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಕುಮಾರ್ ರವರು ನ್ಯಾಯ ಮಂಡನೆ ಮಾಡಿದ್ದರು.