ದಾವಣಗೆರೆ (Davanagere): ಬಡವರ ಮಕ್ಕಳು ಐಎಎಸ್, ಐಪಿಎಸ್ ಆಗಬೇಕೆಂಬ ಕನಸು ಕಂಡಿದ್ದೇನೆ. ಹಾಗಾಗಿ, ರಾಜ್ಯದ ಪ್ರತಿ ಜಿಲ್ಲೆಗಳಿಗೂ ಹೋಗುತ್ತಿದ್ದೇನೆ. ಗ್ರಾಮೀಣ ಪ್ರದೇಶದ ಮಕ್ಕಳು ಯಾವುದೇ ಅವಕಾಶಗಳಿಂದ ವಂಚಿತರಾಗಬಾರದು. ಉಜ್ವಲ ಭವಿಷ್ಯ ಅವರದ್ದಾಗಬೇಕು. ಈ ನಿಟ್ಟಿನಲ್ಲಿ ಪ್ರವಾಸ ಮಾಡಿ ಶಿಕ್ಷಣದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಜಿಲ್ಲೆಯ ಹರಿಹರ ತಾಲ್ಲೂಕಿನ ಸುಕ್ಷೇತ್ರ ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದಲ್ಲಿ ನಡೆದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾಸ್ವಾಮಿಗಳವರ 20ನೇ ವರ್ಷದ ಪುಣ್ಯಾರಾಧನಾ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮಿಗಳವರ 18ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳೂ ಒಳ್ಳೆಯ ಶಿಕ್ಷಣ ಪಡೆಯುವಂತಾಗಬೇಕು. ಆಗ ಮಾತ್ರ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಹೋಗಿ ಸ್ವಾವಲಂಬನೆ ಜೀವನ ಸಾಗಿಸಬಹುದು. ಧೈರ್ಯವೂ ಬರುತ್ತದೆ. ಸ್ವಾಭಿಮಾನದ ಬದುಕು ಸಾಗಿಸಬಹುದು. ಉಜ್ವಲ ಅವಕಾಶ ಸಿಗಲಿದೆ. ಭವಿಷ್ಯವೂ ಉತ್ತಮ ಆಗಿರುತ್ತದೆ. ಶೈಕ್ಷಣಿಕ ಕ್ರಾಂತಿಗಾಗಿ ರಾಜ್ಯ ಸುತ್ತಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶದ ಶಾಲೆಗಳು, ಕಾಲೇಜುಗಳಿಗೆ ಹೋಗಿ ಶಿಕ್ಷಣದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ಮಠಗಳು ಹಾಗೂ ಶ್ರೀಗಳ ಆಶೀರ್ವಾದ, ಸಹಕಾರ ಬೇಕು ಎಂದು ಪ್ರತಿಪಾದಿಸಿದರು.
ಮಠಮಾನ್ಯಗಳು ಶೈಕ್ಷಣಿಕ ರಂಗದಲ್ಲಿ ಅಚ್ಚಳಿಯದ ಕೈಂಕರ್ಯ ಮಾಡಿವೆ. ಅನ್ನದಾನ, ವಿದ್ಯಾದಾನ ಮಾಡಿವೆ. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿವೆ. ಮಠಗಳಿಂದ ಆಗಿರುವ ಸೇವಾ ಕಾರ್ಯಗಳು ಅನನ್ಯ. ನೈತಿಕತೆ, ಪ್ರಾಮಾಣಿಕತೆ ಉಳಿಯಬೇಕಾದರೆ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕು. ಸೇವಾ ಕಾರ್ಯಗಳು ಜನಮಾನಸದಲ್ಲಿ ಉಳಿದಾಗ ಮಾತ್ರ ಧರ್ಮ ಉಳಿಯುತ್ತದೆ. ಧರ್ಮಕಾರ್ಯಗಳು ನೆನಪಿನಲ್ಲಿರುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.
ಇಡೀ ದೇಶವೇ ತಿರುಗಿ ನೋಡುವಂತೆ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಿ ಬೆಳೆಸಿದ್ದೇನೆ. ಇದು ಸಾಧ್ಯವಾಗಿಸುವಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಸಮಾಜ ಸೇವೆ ಮಾಡಬೇಕೆಂಬ ಕನಸು ಹೊತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ಜನರು ತೋರಿದ ಪ್ರೀತಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ಬೆಂಗಳೂರು, ದಾವಣಗೆರೆಯಂಥ ನಗರಗಳಲ್ಲಿ ವಾಸ ಮಾಡುವ ನಾವೂ ನಿತ್ಯವೂ ಒತ್ತಡದಲ್ಲಿ ಜೀವನ ಸಾಗಿಸುತ್ತೇವೆ. ಆದ್ರೆ, ಮಠಕ್ಕೆ ಬಂದ ಬಳಿಕ ಇಲ್ಲಿನ ವಾತಾವರಣ, ಭಜನೆ, ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಆನಂದವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.
Read also : Crime news | ಸರಗಳ್ಳತನ: 2.80 ಲಕ್ಷ ಮೌಲ್ಯದ ಸ್ವತ್ತು ವಶ
ಈ ಸಂದರ್ಭದಲ್ಲಿ ಸದ್ಗುರು ಶ್ರೀ ಯೋಗಾನಂದ ಮಹಾಸ್ವಾಮೀಜಿ ಅವರು ವಿನಯ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು.
ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದಾವಣಗೆರೆಯ ಶ್ರೀ ಜಡೆಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಹದಡಿಯ ಚಂದ್ರಗಿರಿ ಸಂಸ್ಥಾನ ಮಠದ ಶ್ರೀ ಮುರುಳೀಧರ ಮಹಾಸ್ವಾಮೀಜಿ, ಹೋತನಹಳ್ಳಿಯ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಮಹಾಸ್ವಾಮೀಜಿ, ಚಿತ್ರಭಾನುಕೋಟೆಯ ಶ್ರೀ ಕೃಷ್ಣಾನಂದ ಭಾರತಿ ಮಹಾಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮತ್ತು ಹಲವಾರು ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು.