ದಾವಣಗೆರೆ (Davanagere) : 22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮೆಳ್ಳೆಕಟ್ಟೆ ಮತ್ತು ಆಲೂರು ಕೆರೆಗಳನ್ನು ಸೇರಿಸಿ ಪೈಪ್ಲೈನ್ ಮೂಲಕ ಕೆ ತುಂಬಿಸಬೇಕೆಂದು ಎರಡು ಗ್ರಾಮಸ್ಥರು ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಅಡಿಕೆ ತೋಟಗಳಿಗೆ ನೀರುಣಿಸಲು ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ 22 ಕೆರೆಗಳ ಏತನೀರಾವರಿ ಯೋಜನೆಯ ವ್ಯಾಪ್ತಿಗೆ ಆಲೂರು ಮತ್ತು ಮೆಳ್ಳೆಕಟ್ಟೆ ಕೆರೆಗಳನ್ನು ಸೇರಿಸಿ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕೆಂದು ಶಾಸಕರಲ್ಲಿ ಕೋರಿದರು.
Read also : Davanagere | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ; ಡಾ : ಪ್ರಭಾ ಮಲ್ಲಿಕಾರ್ಜುನ್
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, 22 ಕೆರೆಗಳ ಏತನೀರಾವರಿ ಯೋಜನೆಯ ಕಳಪೆ ಕಾಮಗಾರಿಯಿಂದ ಈಗಾಗಲೇ ಈ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಪೈಪ್ಲೈನ್ ಮಾರ್ಗದಲ್ಲಿ ಅಲ್ಲಲ್ಲಿ ಪೈಪ್ ಹೊಡೆಯುತ್ತಿರುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಹೀಗಾಗಿ ಜಲಸಂಪನ್ಮೂಲ ಸಚಿವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು 22 ಕೆರೆಗಳ ಏತನೀರಾವರಿ ಯೋಜನೆಯ ಹೊಸ ಪೈಪ್ಲೈನ್ ಕಾಮಗಾರಿ ಕೈಗೊಂಡು ಈ ಭಾಗದ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಿ ರೈತರ ನೀರಿನ ಭವಣೆ ನೀಗಿಸಬೇಕೆಂದು ಒತ್ತಾಯಿಸಿದ್ದೇವೆ.
ಡಿ.ಕೆ.ಶಿವಕುಮಾರ್ ಅವರು ಕೂಡ ಸಾಕಾರಾತ್ಮಕವಾಗಿ ಸ್ಪಂದಿಸಿದ್ದು, ಹೊಸ ಪೈಪ್ಲೈನ್ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಆಲೂರು ಮತ್ತು ಮೆಳ್ಳೆಕಟ್ಟೆ ಕೆರೆಗಳಿಗೆ ಪೈಪ್ಲೈನ್ ಸಂಪರ್ಕ ಕಲ್ಪಿಸಿ ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ಮಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಆಲೂರು ಸಿದ್ದೇಶ್, ಹನುಮಂತಣ್ಣ, ಸೋಮಣ್ಣ, ರೈತರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇದ್ದರು.
ಮ್ಯಾಸರಹಳ್ಳಿ ಕೆರೆ ಪರಿಶೀಲನೆ
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮ್ಯಾಸರಹಳ್ಳಿ ಗುಡ್ಡದ ಬಳಿಯಿರುವ ಕೆರೆಯನ್ನು ಮರು ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಜಿಟಿಜಿಟಿ ಸುರಿಯುತ್ತಿದ್ದ ಮಳೆಯ ನಡುವೆಯೂ sಭೇಟಿ ನೀಡಿ ಕೆರೆಯನ್ನು ಪರಿಶೀಲನೆ ನಡೆಸಿದರು.
ಈ ಕೆರೆಯು 30 ಎಕರೆ ಪ್ರದೇಶದ ವ್ಯಾಪ್ತಿ ಹೊಂದಿದ್ದು, ಕೆರೆಯ ಸುತ್ತ ಕೆರೆಯ ಏರಿ ನಿರ್ಮಾಣ ಮಾಡದ ಕಾರಣ ಮಳೆಗಾಲದಲ್ಲಿ ನೀರು ಕೆರೆಯಲ್ಲಿ ಸಂಗ್ರಹವಾಗುವುದಿಲ್ಲ. ಭದ್ರವಾದ ಕೆರೆಯ ಏರಿ ನಿರ್ಮಿಸಿದರೆ ಕೆರೆಯಲ್ಲಿ ನೀರು ಸಂಗ್ರಹವಾಗಿ ಈ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ಅಂತರ್ಜಲ ಮಟ್ಟ ಹೆಚ್ಚಳವಾಗುವುದಲ್ಲದೇ, ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವುದಿಲ್ಲ ಎಂದು ಮ್ಯಾಸರಹಳ್ಳಿ ಗ್ರಾಮಸ್ಥರು ಶಾಸಕರಿಗೆ ಮನವರಿಕೆ ಮಾಡಿದರು.
ಕೆರೆಯ ವ್ಯಾಪ್ತಿಯ ಸುತ್ತ ಏರಿ ಎತ್ತರಿಸುವ ಮೂಲಕ ಭದ್ರವಾದ ಏರಿ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ ನೀರಿನ ಸಮಸ್ಯೆ ನೀಗಿಸಬಹುದು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆರೆಯ ಏರಿ ನಿರ್ಮಾಣಕ್ಕೆ ಸೂಚಿಸುವುದಾಗಿ ಭರವಸೆ ನೀಡಿದರು. ssಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಮಹೇಶಣ್ಣ, ಕರಿಬಸಪ್ಪ, ಪಾಲಪ್ಪ, ರುದ್ರೇಶ್, ತಾಪಂ ಮಾಜಿ ಸದಸ್ಯ ಶಂಬಣ್ಣ, ಕಲ್ಲೇಶಣ್ಣ ಹಾಗೂ ಗ್ರಾಮಸ್ಥರು ಇದ್ದರು.