ಬೆಂಗಳೂರು : ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಜಾತ್ಯಾತೀತರಾಗಿ ಅವರು ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಪಾಪಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಜನತೆ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವುದಲ್ಲದೇ ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಕಾರಣದಿಂದ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಕೆಂಪೇಗೌಡರು ಜಾತ್ಯಾತೀತ ವ್ಯಕ್ತಿ
ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತವನ್ನು ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡನೆ ಮಾಡಲಿಲ್ಲ. ಎಲ್ಲಾ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು. ಅವರ ಆಡಳಿತ ಕಾಲದಲ್ಲಿ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂದು ತಿಳಿಯುತ್ತದೆ. ಕೆಂಪೇಗೌಡರು ಕೃಷ್ಣದೇವರಾಯರ ಕಾಲದಲ್ಲಿ ಬೆಂಗಳೂರು ಪ್ರಾಂತ್ಯದ ಆಡಳಿತಗಾರರಾಗಿದ್ದರು ಎಂದರು.
ಎಲ್ಲರಲ್ಲೂ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬಿದರು
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿ ಮಾಡಲಾರರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇತಿಹಾಸವನ್ನು ಅರಿತು ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು ಎಂದರು.
ಸಮಜದಲ್ಲಿ ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಮಾನವರಾಗಿ ಬದುಕಬೇಕು. ಕೆಂಪೇಗೌಡರು ಅವರ ಆಡಳಿತಾವಧಿಯಲ್ಲಿ ಜಾತಿ ಮಾಡಲಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ ಎಂದರು.
ದೂರದೃಷ್ಟಿ ಇಟ್ಟುಕೊಂಡು ಆರ್ಥಿಕ, ಸಾಮಾಜಿಕ ಬೆಳವಣಿಗೆ ಯಾವ ರೀತಿಯಾಗಬೇಕೆಂದು ಅರಿತು, ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದರು. ಬೆಂಗಳೂರಿನಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲವಾದರೂ ಅನೇಕ ನದಿಗಳನ್ನು ನಿರ್ಮಿಸಿದರು. ಆರ್ಥಿಕವಾಗಿ ಬೆಂಗಳೂರು ಬೆಳೆಯಬೇಕೆಂದು ನಗರದಲ್ಲಿ ಕೆರೆಗಳು, ದೇವಾಲಯಗಳು, ಪೇಟೆಗಳನ್ನು ನಿರ್ಮಾಣ ಮಾಡಿದರು. ಅಂಥ ವ್ಯಕ್ತಿಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅನೇಕ ರಾಜರು, ನಾಡಪ್ರಭುಗಳು ಆಗಿ ಹೋಗಿದ್ದರೂ ಸಮಾಜಮುಖಿಯಾಗಿ ಕೆಲಸ ಮಾಡಿರುವವರನ್ನು ನಾವು ಸ್ಮರಿಸುತ್ತೇವೆ ಹಾಗೂ ಅವರಿಂದ ಪ್ರೇರಣೆ ಹಾಗೂ ಸ್ಪೂರ್ತಿಯನ್ನು ಪಡೆಯುತ್ತೇವೆ ಎಂದರು.
ಕೆಂಪೇಗೌಡರು ಬದುಕಿದ್ದ ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕೆಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಸ್ವಾಮೀಜಿಯವರ ಸಲಹೆ ಮೇರೆಗೆ ಸ್ಥಾಪಿಸಲಾಯಿತು. ಬೆಂಗಳೂರು ವಿಶ್ವವಿಖ್ಯಾತವಾಗಿದ್ದು ಬ್ರಾಂಡ್ ಬೆಂಗಳೂರು ಸಾಧ್ಯವಾಗಿಸಲು ನಾವು ಹೊರಟಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪುರಸ್ಕøತರನ್ನು ಅಭಿನಂದಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ್ ಸ್ವಾಮೀಜಿ , ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಮಹಾಸಂಸ್ತಾನ ಮಠದ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಕೆ.ಹೆಚ್ . ಮುನಿಯಪ್ಪ, ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯ ಸಲೀಂ ಅಹ್ಮದ್, ರಾಮೋಜಿ ಗೌಡ, ಪುಟ್ಟಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ವಿಶ್ವನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಮೊದಲಾದವರು ಉಪಸ್ಥಿತರಿದ್ದರು.