ದಾವಣಗೆರೆ.ಆ.22: ನಷ್ಟದ ಕಾರಣದಿಂದ ಮುಚ್ಚಿರುವ ಕಂಪನಿಯ ಹೆಸರು ಬಳಸಿ ಲಾಭಾಂಶದ ಆಸೆ ತೋರಿಸಿ ಹಣ ತೊಡಗಿಸಿಕೊಂಡು ಮೋಸ ಮಾಡಿದ ಆರೋಪಿ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 70 ಸಾವಿರ ರೂ ದಂಡ ವಿಧಿಸಿ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ತೀರ್ಪು ನೀಡಿದೆ. ಶ್ರೀ ಸಾಯಿ ಚೌಡೇಶ್ವರಿ ಟ್ರೇರ‍್ಸ್ ಮಾಲೀಕ ಮಾಲತೇಶ್ ಹಾಗೂ ಉಷಾ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಪ್ರಕರಣದ ವಿವರ : ನಗರದ ಕೆಬಿ ಬಡಾವಣೆಯ ಷಣ್ಮುಖಪ್ಪ ಸೊಕ್ಕಿ ಇವರನ್ನು ಪರಿಚಯ ಮಾಡಿಕೊಂಡ ಮಾಲತೇಶ್ ಮತ್ತು ಉಷಾ ದಂಪತಿ ನಮ್ಮ ಸಂಸ್ಥೆಯು ಹಿಂದೂಸ್ಥಾನ್ ಯುನಿ ಲೀವರ್ ಲಿ ಬಾಂಬೆ ಕಂಪನಿಯೊಂದಿಗೆ ವ್ಯವಹಾರ ಒಡಂಬಡಿಕೆ ಮಾಡಿಕೊಂಡಿದ್ದು, ಸಂಸ್ಥೆಯ ಮೂಲಕ ನೀವು ಹಣ ತೊಡಗಿಸಿದಲ್ಲಿ 4% ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಹಣ ತೊಡಗಿಸಲು ಪುಸಲಾಯಿಸಿದ್ದರು.
ಈ ದಂಪತಿಯ ಮಾತು ನಂಬಿದ ಷಣ್ಮುಖಪ್ಪ ಸೊಕ್ಕಿ ಅವರು 28/02/2017 ರಂದು 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿ 100 ರೂ ಸ್ಟಾಂಪ್ ಪೇಪರ್‌ನಲ್ಲಿ ಕರಾರು ಪತ್ರವನ್ನು ಸಂಸ್ಥೆಯ ಹೆಸರಿನಡಿ ಬರೆದುಕೊಟ್ಟಿದ್ದರು. ಒಡಂಬಡಿಕೆಯಲ್ಲಿ ಮ್ಯಾನೇಜರ್ ಚೌವ್ಹಾಣ್ ಎಂಬುವವರ ಸಹಿ ಹಾಗೂ ಕಂಪನಿಯ ಶೀಲು ಇರುತ್ತದೆ. ಈ ಹೂಡಿಕೆ ಲಾಭಾಂಶವನ್ನು ನಾನೇ ತರಿಸಿಕೊಡುತ್ತೇನೆಂದು ಮಾಲತೇಶ್ ನಂಬಿಸಿದ್ದರು. ಹಣ ಕೇಳಿದರೆ ಇಂದು, ನಾಳೆ ಎಂದು ಮುಂದೂಡುತ್ತಾ ಹಣವನ್ನು ನೀಡಿರುವುದಿಲ್ಲ.
ಈ ಬಗ್ಗೆ ಅನುಮಾನಗೊಂಡು ಸಂಸ್ಥೆಯ ಬಗ್ಗೆ ವಿಚಾರಿಸಿದಾಗ ಈ ಕಂಪನಿಯು 31/01/2015 ರಂದೇ ನಷ್ಟದಿಂದ ಮುಚ್ಚಿದೆ ಎಂದು ತಿಳಿದು ಬಂದಿದೆ. ಆರೋಪಿತರು ಬಹುರಾಷ್ಟ್ರೀಯ ಕಂಪನಿಯ ಹೆಸರು ಮತ್ತು ಲೋಗೋವನ್ನು ಉಪಯೋಗಿಸಿಕೊಂಡು ಹಣ ತೊಡಗಿಸುವಂತೆ ಪುಸಲಾಯಿಸಿ ಆಕರ್ಷಕ ಲಾಭಾಂಶಗಳನ್ನು ಕೊಡಿಸುತ್ತೇವೆಂದು ಭರವಸೆ ಕೊಟ್ಟು ವಂಚನೆ ಮಾಡಿರುವ ಕುರಿತು ಷಣ್ಮುಖಪ್ಪ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕೆಟಿಜೆ ನಗರದ ಠಾಣಾ ಪಿಎಸ್‌ಐ ಪ್ರಭು ಡಿ ಕೆಳಗಿನಮನಿ ತನಿಖೆ ಕೈಗೊಂಡು ಆರೋಪಿತರಾದ ಮಾಲತೇಶ್ ಮತ್ತು ಪತ್ನಿ ಉಷಾ ಅವರುಗಳು 4% ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ 1 ಲಕ್ಷ ರೂಪಾಯಿ ತೊಡಗಿಸಿಕೊಂಡು ಹಣ ಹೂಡಿಕೆ ಕರಾರು ಪತ್ರವನ್ನು ಸೃಷ್ಟಿಸಿ ಅದರಲ್ಲಿ ಹಿಂದೂಸ್ಥಾನ್ ಯುನಿ ಲಿಮಿಟೆಡ್ ಮ್ಯಾನೇಜರ್ ಚೌವ್ಹಾಣ್ ಎಂದು ಸುಳ್ಳು ವ್ಯಕ್ತಿಯನ್ನು ಸೃಷ್ಟಿಸಿರುವುದು ಹಾಗೂ ಯಾವುದೇ ಲಾಭಾಂಶ ನೀಡದೆ ಪಿರ್ಯಾದಿಗೆ ವಂಚನೆ ಮಾಡಿರುವುದು ಹಾಗೂ ಕೃತ್ಯಕ್ಕೆ ಬಳಸಿದ ಲ್ಯಾಪ್‌ಟಾಪ್‌ನ್ನು ಅನಾಮಧೇಯ ವ್ಯಕ್ತಿಗೆ ಮಾರಾಟಮಾಡಿ ಸಾಕ್ಷಿನಾಶ ಮಾಡಿರುವುದು ದೃಢಪಟ್ಟ ಮೇರೆಗೆ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಚಪ್ಪ ದೊಡ್ಡಬಸವರಾಜ್ ಅವರು ಆರೋಪ ಸಾಬೀತಾಗಿದ್ದರಿಂದ ಮಾಲತೇಶ್ ಮತ್ತು ಉಷಾ ಇಬ್ಬರಿಗೂ ತಲಾ 1 ವರ್ಷ ಶಿಕ್ಷೆ 70 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಪರ‍್ಯಾದಿಯವರ ಪರವಾಗಿ ಸರ್ಕಾರಿ ವಕೀಲ ಚಿತ್ರಶೇಖರಪ್ಪ ವಾದ ಮಂಡಿಸಿದ್ದರು.