ದಾವಣಗೆರೆ.ಮಾ.12 (Davanagere); ಅಡಿಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದಲ್ಲಿರುವ ಮಖಾನಾ ಮಂಡಳಿ ಮಾದರಿಯಲ್ಲಿ ‘ಅಡಿಕೆ ಮಂಡಳಿ’ ಸ್ಥಾಪಿಸಬೇಕು ಎಂದು ನವದೆಹಲಿಯ ಸಂಸತ್ ಅಧಿವೇಶನದಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಸದನದ ಪ್ರಶ್ನೋತ್ತರ ವೇಳೆಯಲ್ಲಿ ಕರ್ನಾಟಕದಲ್ಲಿ ಅತ್ಯಾವಶ್ಯಕವಾಗಿರುವ ಅಡಿಕೆ ಮಂಡಳಿ ಸ್ಥಾಪನೆಯ ಬಗ್ಗೆ ಗಮನಸೆಳೆದ ಸಂಸದರು ಕರ್ನಾಟಕವು ಅಡಿಕೆ ಬೆಳೆ ಬೆಳೆಯುತ್ತಿರುವ ಪ್ರಮುಖ ರಾಜ್ಯವಾಗಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ 40%ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಈ ಬೆಳೆಯನ್ನು ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ನನ್ನ ಲೋಕಸಭಾ ಕ್ಷೇತ್ರವಾದ ದಾವಣಗೆರೆಯಲ್ಲಿಯೂ ಸಹ ವ್ಯಾಪಕವಾಗಿ ಬೆಳೆಸಲಾಗುತ್ತಿದೆ. ಹಿಂದಿನಿಂದಲೂ ಕರಾವಳಿ, ಮಲೆನಾಡು ಹಾಗೂ ಅರ್ಧ ಮಲೆನಾಡು ಪ್ರದೇಶಗಳಲ್ಲಿ ಬೆಳೆಸಲಾಗುತ್ತಿರುವ ಅಡಿಕೆ ಈಗ ಸಮತಟ್ಟು ಪ್ರದೇಶಗಳಿಗೂ ವಿಸ್ತರಿಸಿದೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಬೆಳೆಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಜೀವನ ನಿರ್ವಹಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.ಆದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಅಡಿಕೆ ಬೆಳೆಯು ಬೇರು ಕೊಳೆರೋಗ, ಹಳದಿ ಎಲೆ ಚುಕ್ಕಿ ಇತ್ಯಾದಿ ರೋಗಗಳಿಗೆ ತುತ್ತಾಗುತ್ತಿದೆ ಹಾಗೂ ಬೆಳೆಯ ಉತ್ಪಾದನೆಗೆ ತೀವ್ರ ಪರಿಣಾಮ ಬೀರುತ್ತಿದೆ. ಇದಲ್ಲದೇ, ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದು ಆಗುತ್ತಿರುವುದರಿಂದ ಬೆಲೆ ಕುಸಿತವು ಸಂಭವಿಸಿದ್ದು, ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬೆಲೆ ಸ್ಥಿರತೆ ಇಲ್ಲದಿರುವುದು ಹಾಗೂ ನಿಯಂತ್ರಣದ ಕೊರತೆಯಿಂದಾಗಿ ರೈತರು ಮಾರುಕಟ್ಟೆಯ ಅಸ್ಥಿರತೆಯ ಎದುರಿಸುತ್ತಿದ್ದಾರೆ.
ಆದುದರಿಂದ, ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯ ಅಡಿಕೆ ಬೆಲೆಗೆ ನಿಯಂತ್ರಣ ಒದಗಿಸಬೇಕು, ಆಮದು ಶುಲ್ಕ ಹೆಚ್ಚಿಸಬೇಕು ಮತ್ತು ಅಕ್ರಮ ಆಮದುಗಳನ್ನು ತಡೆಯಬೇಕು. ಜೊತೆಗೆ,
ಅಡಿಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ’ಅಡಿಕೆ ಮಂಡಳಿ’ ಸ್ಥಾಪಿಸಬೇಕು ಎಂದು ಒತ್ತಾಯಿಸುವ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸದಾ ಸಿದ್ದ ಎಂದು ಸಂಸದರು ಸದನದ ಗಮನಸೆಳೆದರು.