ದಾವಣಗೆರೆ.ಜು.28: ದಾವಣಗೆರೆಯ ರಂಗ ಸಾರಥಿ ತಂಡದಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ಜಾನಪದ ತಜ್ಞ ಡಾ. ಎಂ. ಜಿ. ಈಶ್ವರಪ್ಪ ಅವರ ಸ್ಮರಣಾರ್ಥ ನಗರದ ಎ ವಿ ಕೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ “ಹುತಾತ್ಮರು” ಏಕವ್ಯಕ್ತಿ ನಾಟಕ ಪ್ರದರ್ಶನ ಗಮನ ಸೆಳೆಯಿತು.
ಹಿರಿಯ ಕಲಾವಿದ ರವೀಂದ್ರ ಎಚ್.ಅರಳಗುಪ್ಪಿ ಅವರು ನೀಡಿದ ಏಕವ್ಯಕ್ತಿ ಪಾತ್ರಾಭಿನಯ ಪ್ರೇಕ್ಷಕರ ಹೃದಯ ತಟ್ಟಿತು.ಕಾರ್ಗಿಲ್ ಯುದ್ದದಲ್ಲಿ ವೀರಮರಣವನ್ನಪ್ಪಿದ ಭಾರತೀಯ ಸೈನಿಕರ ಸಾಹಸ, ದೇಶ ಸೇವೆಗಾಗಿ ಹುತಾತ್ಮ ಸೈನಿಕ ಕುಟುಂಬಗಳ ತ್ಯಾಗ, ಬಲಿದಾನದ ವಸ್ತು ಆಧರಿಸಿದ ಈ ನಾಟಕದ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಹನ್ಮಂತ್ ಪೂಜಾರ್ ಅವರದಾಗಿತ್ತು.
ಎ ವಿ ಕೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಚಾರ್ಯರು, ಉಪನ್ಯಾಸಕರು, ಪಿ. ಎಸ್.ಎಸ್. ಇ. ಎಂ.ಆರ್. ಶಾಲೆ ಡೀನ್ ಹಾಗೂ ರಂಗಾಸಕ್ತರು ಮತ್ತು ಪತ್ರಕರ್ತರು ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಯಿತು.