ಬೆಂಗಳೂರು : ಸುಧೀರ್ಘ ಸಮಯದ ನಂತರ ಕಿರುತೆರೆಗೆ ಎಂಟ್ರಿಕೊಟ್ಟಿರುವ ಯತಿರಾಜ ಜೈ ಮಾತಾ ಕಂಬೈನ್ಸ್ ನ ” ನಿನಗಾಗಿ ” ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.
‘ನಿನಗಾಗಿ’ ಧಾರಾವಾಹಿಯನ್ನು ಸಂಪೃಥ್ವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ನಟಿಸುತ್ತಿದ್ದಾರೆ. ಯತಿರಾಜ್ ನಾಯಕಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಶೇಷವಾಗಿದೆ. ಈ ಪಾತ್ರಕ್ಕಾಗಿ ಗಡ್ಡ ಬೆಳೆಸಿ ಮುಖದಲ್ಲಿ ಪ್ರಬುದ್ದತೆ ತುಂಬಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಯತಿರಾಜ್, ಎಲ್ಲರ ನಡುವೆ ಇದ್ದರೂ ಅಜ್ಞಾತವಾಸಿಯಾಗಿ, ಅಂತರ್ಮುಖಿಯಾಗಿ, ವೇದನೆಗಳನ್ನು ಹೊರಹಾಕದೆ ಒಳಗೊಳಗೆ ನೋಯುವ- ಬೇಯುವ ಅಪರೂಪದ ಪಾತ್ರವಿದು. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಅನೇಕ ಸನ್ನಿವೇಶಗಳನ್ನು ಲೇಖಕಿ ಯಶಾ ಶೆಟ್ಟಿ ಅವರು ಸೃಷ್ಠಿಸಿರುವುದು ನನಗೆ ವರವಾಗಿದೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಕಾಣಬರುವ ಶ್ರೀಮಂತಿಕೆಯ ಸನ್ನಿವೇಶಗಳನ್ನು ನಮ್ಮ ಧಾರಾವಾಹಿಯಲ್ಲೂ ನೀವುಗಳು ನೋಡಬಹುದು ಎನ್ನುವ ಯತಿರಾಜ್, ಅಷ್ಟೇ ದೊಡ್ಡ ಮಟ್ಟದ ತಾರಾ ಬಳಗವನ್ನು ನಿರ್ಮಾಪಕರು ತುಂಬಿರುವುದರಿಂದ ಧಾರಾವಾಹಿಯ ಮೆರಗು ಹೆಚ್ಚಿದೆ ಎಂದು ಬಣ್ಣಿಸುತ್ತಾರೆ.
ಜೀವನ್ ಅವರ ಕಲರ್ ಫುಲ್ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಋತ್ವಿಕ್, ಬೇಬಿ ಸಿರಿ, ಸೋನಿಯಾ, ವಿಜಯ್ ಕೌಂಡಿನ್ಯ, ವಿಕ್ಟರಿ ವಾಸು, ಪುನೀತ್, ಕಾಮಿಡಿ ಕಿಲಾಡಿ ಖ್ಯಾತಿಯ ಮನೋಹರ್, ಸುಮೋಕ್ಷ, ಮಾನಸ, ಜಗದೀಶ್ ಮಲ್ನಾಡ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.