ದಾವಣಗೆರೆ ಡಿ.30 (Davanagere) : ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ಗಳ ಪ್ರಭಾವಕ್ಕೆ ಒಳಗಾಗಿದ್ದು, ಅವುಗಳಿಂದ ಹೊರತರಲು ಜಾನಪದ ಕಲೆಗಳ ತರಬೇತಿ ನೀಡುವುದು ಅವಶ್ಯವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್ ಕುಮಾರ್ ಹೇಳಿದರು.
ರಂಗ ಅನಿಕೇತನ, ದಾವಣಗೆರೆ ಮಾನವ ಬಂಧುತ್ವ ವೇದಿಕೆ, ಎ.ವಿ.ಕೆ. ಕಾಲೇಜು ಆಶ್ರಯದಲ್ಲಿ ಮಹಿಳೆಯರಿಗಾಗಿ ತಮಟೆ ಮತ್ತು ಕಂಸಾಳೆ ತರಬೇತಿ ಶಿಬಿರವನ್ನು ಎ.ವಿ.ಕೆ. ಕಾಲೇಜಿನ ಆವರಣದಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕವು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದ್ದು, ಇಲ್ಲಿ ಸಾವಿರಾರು ಜನಪದ ಕಲೆಗಳು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಸಾಗುತ್ತಾ ಬಂದಿವೆ. ಇಂದಿನ ಆಧುನಿಕ ಯುಗದಲ್ಲಿ ಎಲೆಕ್ಟಾçನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಜನಪದ ಕಲೆಯ ಭವ್ಯಪರಂಪರೆ ಕಡಿಮೆಯಾಗುತ್ತಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ತರಬೇತಿ ನೀಡುವುದು ಮುಖ್ಯವಾಗಿದೆ ಎಂದರು.
ಇಂದಿನ ಸಂದರ್ಭದಲ್ಲಿ ತಮಟೆ ಮತ್ತು ಕಂಸಾಳೆ ಶಿಬಿರ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ತರಬೇತಿಗಳನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಏರ್ಪಡಿಸುವ ಮೂಲಕ ಜಾನಪದ ಕಲೆಗಳ ಭವ್ಯಪರಂಪರೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷ ತೆಯನ್ನು ಆರ್.ಆರ್.ಶಿವಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ಹೆಚ್.ಎಸ್. ಯೋಗೀಶ್ ಆಗಮಿಸಿದ್ದರು.
ರಂಗ ಅನಿಕೇತನದ ಅಧ್ಯಕ್ಷ ರಾದ ಸುಧಾ ಹೆಚ್.ಎನ್., ವಕೀಲರಾದ ಉಷಾ ಕೈಲಾಸದ್, ನಾಗಮಣಿ ಹಂಪಾಳಿ, ಸಂಪನ್ಮೂಲ ವ್ಯಕ್ತಿಗಳಾಗಿ ಮನೋಜ್ ಆರ್. ಕಂಬಾಳಿ ಹಾಗೂ ಪ್ರಮೋದ್ ಕುಮಾರ್ ಭಾಗವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಸವಿತಾ ಆರ್.ಜಿ. ಸ್ವಾಗತಿಸಿದರು. ಡಾ. ಲೋಹಿತ್ ಹೆಚ್.ಎನ್. ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ರೇಖಾ ಎಂ.ಪಿ. ಹಾಗೂ ಪಲ್ಲವಿ ನಿರೂಪಿಸಿದರು.
Read also : ಜ. 5, 6 ರಂದು ರಾಜ್ಯ ಮಟ್ಟದ ಯುವಜನೋತ್ಸವ : ಮುಖ್ಯಮಂತ್ರಿಗಳಿಂದ ಉದ್ಘಾಟನೆ