ದಾವಣಗೆರೆ: ನಗರದಲ್ಲಿ ಸ್ಮಾರ್ಟ್ ಸಿಟಿಯಿಂದ ನಿರ್ಮಿಸಿರುವ ಇ- ಶೌಚಾಲಯಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ದಾವಣಗೆರೆ ನಗರದ ವಿವಿಧ ಪಾರ್ಕ್ಗಳಲ್ಲಿ ಇ-ಶೌಚಾಲಯ ಹಾಗೂ ವ್ಯಾಯಾಮದ ಸಲಕರಣೆಗಳನ್ನು ಅಳವಡಿಸಿದ್ದು, ಈ ಶೌಚಾಲಯಗಳು ಮತ್ತು ವ್ಯಾಯಾಮದ ಸಲಕರಣೆಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವುದಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ ಹಾಗೂ ಸಂಘಟನಾ ಕಾರ್ಯದರ್ಶಿ ಶಿಡ್ಲಪ್ಪ (ಸುರೇಶ್) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಬೆಳಗಿನ ಜಾವ ಹಾಗೂ ಸಂಜೆ ಉದ್ಯಾವನಗಳಲ್ಲಿ ವಾಯು ವಿಹಾರಕ್ಕೆ ಆಗಮಿಸುವ ವಯೋವೃದ್ಧರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿರುವ ಇ-ಶೌಚಾಲಯಗಳು ಹಾಗೂ ವ್ಯಾಯಾಮ ಸಾಮಗ್ರಿಗಳು ಹಾಳಾಗುತ್ತಿರುವುದನ್ನು ನೋಡಿದರೆ ಸ್ಮಾರ್ಟ್ ಸಿಟಿ ಯೋಜನೆಯ ಸೌಲಭ್ಯಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ದೊರಕದೆ ಕೇವಲ ತೋರಿಕೆಗೆ ಮಾಡಿರುವಂತಿದೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರ ಹಣ ವಿನಾಕಾರಣ ಪೋಲಾಗುತ್ತಿದ್ದು, ಕೂಡಲೇ ಪಾರ್ಕ್ಗಳಲ್ಲಿರುವ ಇ-ಶೌಚಾಲಯಗಳನ್ನು ಹಾಗೂ ವ್ಯಾಯಾಮ ಸಾಮಗ್ರಿಗಳನ್ನು ದುರಸ್ತಿಗೊಳಿಸಿ, ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.