ದಾವಣಗೆರೆ (Davangere) : ‘ಧನ್ವಂ ತರತೀ ಇತೀ ಧನ್ವಂತರಿ’ – ಅಂದರೆ ಪಾಪವನ್ನು ಕಳೆಯುವವನು, ದೋಷವನ್ನು ದೂರ ಮಾಡುವವನು, ಅನಾರೋಗ್ಯವನ್ನು ಕಳೆಯುವವನು, ಆರೋಗ್ಯ ಭಾಗ್ಯವನ್ನು ಕೊಡುವವನು ಶ್ರೀ ಧನ್ವಂತರಿ ದೇವರು ಎಂದು ಹಿರಿಯ ಪ್ರವಚನಕಾರ ವೇದಬ್ರಹ್ಮ ಪೂಜ್ಯ ಶ್ರೀ ಗೋಪಾಲ ಆಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಧನ್ವಂತರಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ‘ಧನ್ವಂತರಿ ಜಯಂತಿ ಮಹತ್ವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮುನಿಶ್ರೇಷ್ಠ ದೂರ್ವಾಸರ ಶಾಪದಿಂದ ದೇವತೆಗಳೆಲ್ಲರೂ ಸ್ವರ್ಗವನ್ನು ತ್ಯಜಿಸಬೇಕಾದ ಸಂದರ್ಭದಲ್ಲಿ ಅಮರತ್ವವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರಸಾಗರದಲ್ಲಿ ಸಮುದ್ರ ಮಂಥನ ಮಾಡುವ ಕಾಲದಲ್ಲಿ ಅಮೃತ ಕಲಶವನ್ನು ಹೊತ್ತು ಧರೆಗಿಳಿದ ಮಹಾವಿಷ್ಣುವಿನ ರೂಪವೇ ಶ್ರೀ ಧನ್ವಂತರಿ ದೇವರು ಎಂದು ತಿಳಿಸುತ್ತಾ ಈ ದಿನದ ವಿಶೇಷತೆ, ವೈಶಿಷ್ಠ್ಯತೆಗಳನ್ನು ತಿಳಿಸುತ್ತಾ, ಆರೋಗ್ಯಭಾಗ್ಯವನ್ನು ಪಡೆಯಲು ಪ್ರತಿನಿತ್ಯ ಒಂದು ಕಳಶದ ತುಂಬ ನೀರನ್ನು ತುಂಬಿ ತುಳಸಿ ಎಲೆಯನ್ನು ಹಾಕಿ ಎರಡೂ ಕೈ ಹಸ್ತವನ್ನು ಕಳಶದ ಮೇಲಿಟ್ಟು ಸಂಕಲ್ಪ ಮಾಡಿ ‘ಓಂ ಶ್ರೀ ಧನ್ವಂತರಿಯೇ ನಮಃ’ ಎಂಬ ಮತ್ರವನ್ನು ಕನಿಷ್ಠ 12 ರಿಂದ ಗರಿಷ್ಠ 108 ಬಾರಿ ಜಪಿಸುವುದು. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಸರಳ ಪೂಜಾ ವಿಧಾನವನ್ನು ತಿಳಿಸಿಕೊಟ್ಟರು.
ವೇದಬ್ರಹ್ಮ ಪೂಜ್ಯ ಶ್ರೀ ಗೋಪಾಲ ಆಚಾರ್ ಮಣ್ಣೂರ್ ಇವರ ಮಾರ್ಗದರ್ಶನದಲ್ಲಿ ಸರ್ವ ಪೂಜಾ ಕಾರ್ಯಕ್ರಮವನ್ನು ದಂಪತಿಗಳಾದ ಭರತ್ ವಾಧೋನೆ ಮತ್ತು ಶ್ರೀಮತಿ ಸುಮಾ ವಾಧೋನೆ, ಚಿ|| ಶ್ರೀಯನ್ ಇವರುಗಳು ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು.
ಹೂವಿನ ಅಲಂಕಾರ ಸೇವೆಯನ್ನು ಗಣೇಶ್ ವಾಧೋನೆ ಕುಟುಂಬದವರು ಅರ್ಪಿಸಿದರು. ಶ್ರೀಮತಿ ಪೂರ್ಣಿಮಾ ವರದರಾಜ್ ಭಕ್ತಿ ಸಮರ್ಪಿಸಿದರು. ಶಂಕರ್ ಎಲ್.ಎ. ಕುಟುಂಬದವರು ಸರ್ವರಿಗೂ ಪ್ರಸಾದ ಸೇವೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ರಂಗೋಲಿ ಗೌರಮ್ಮ, ರೇಖಾ ಕಲ್ಲೇಶ್, ಶಾಂತಮ್ಮ, ಸಾವಿತ್ರಮ್ಮ, ಸಂಧ್ಯಾ, ಜ್ಯೋತಿಲಕ್ಷ್ಮೀ, ಸಂತೋಷ್ ಹೆಚ್., ಯೋಗ ವಿಜ್ಞಾನ ವಿಭಾಗದ ರಾಹುಲ್ ವಿ.ಕೆ., ಬೇಬಿ ಗುರುಪ್ರಿಯಾ ಆರ್.ಜಿ., ಪೂಜಾ ಕಾರ್ಯದ ಯಶಸ್ಸಿಗೆ ಸಹಕರಿಸಿದರು.
Read also : Davanagere | ನಾಡು, ನುಡಿ, ಸಂಸ್ಕೃತಿ ಉಳಿಸಲು ಸಂಘಟಿತರಾಗಿ ಹೋರಾಡೋಣ : ಮೊಹಮ್ಮದ್ ಜಿಕ್ರಿಯಾ
ಕಡೂರಿನ ಎಂ. ನಾಗೇಂದ್ರರಾವ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜೀವನ್ ಎನ್. ಪವಾರ್, ಅಂಚೆ ಇಲಾಖೆಯ ವೇದಾವತಿ ಡಿ.ಹೆಚ್.ಎಂ., ಮೀಸಲು ಪಡೆಯ ಚಂದ್ರ ಎಸ್., ಯೋಗಸಾಧಕ ಮಹಾಂತೇಶ್ ಇವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಮಹಾಮಂಗಳಾರತಿ, ತೀರ್ಥ ಪ್ರಸಾದ ಫಲ ಹಾಗೂ ದೇಶಿ ಪಾನೀಯ ಸೇವನೆಯೊಂದಿಗೆ ಧನ್ವಂತರಿ ಜಯಂತಿ ಪೂಜಾ ಕಾರ್ಯವು ಸಂಪನ್ನಗೊಂಡಿತು.