ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಮತದಾನ ಜಾಗೃತಿಗಾಗಿ ಏರೋಬಿಕ್ಸ್ ಏರ್ಪಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಮೇ 7 ರಂದು ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಎಲ್ಲರೂ ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಏರೋಬಿಕ್ಸ್ನಿಂದ ನಮ್ಯತೆ, ಸ್ನಾಯುವಿನ ಶಕ್ತಿ, ಹೃದಯ ನಾಳೀಯ ಫಿಟ್ನೆಸ್ನೊಂದಿಗೆ ಅನಾರೋಗ್ಯವನ್ನು ತಡೆಗಟ್ಟುವ ಮತ್ತು ದೈಹಿಕ ಸಾಮಥ್ರ್ಯ ಹೆಚ್ಚಲಿದೆ. ಅದೇ ರೀತಿ ಎಲ್ಲರೂ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಲಿದ್ದು ಮೌಲ್ಯಯುತ ಚುನಾವಣೆಯಾಗಲಿದೆ ಎಂದರು.
ನಿಮ್ಮ ಮತ ನಿಮ್ಮ ಹಕ್ಕು, ನಿವೆಲ್ಲರೂ ತಪ್ಪದೇ ಮತದಾನ ಮಾಡಿ, ಮತದಾನ ಪ್ರಜಾಪ್ರಭುತ್ವದ ಹೃದಯಬಡಿತ ಮತದಾನ ಮಾಡೋಣ, ದೇಶದ ಅಭಿವೃದ್ದಿಗೆ ಕೈಜೋಡಿಸೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು.
ಮತದಾರ ಜಾಗೃತಿ ಅಂಗವಾಗಿ ಕೆ.ಡಿ ಡ್ಯಾನ್ಸ್ ಕಂಪನಿಯಿಂದ ಏರೋಬಿಕ್ಸ್ ಡ್ಯಾನ್ಸ್ ಮಾಡಲಾಯಿತು.
ಜಿಪಂ ಸಿಇಒ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್, ಜಿ.ಪಂ ಉಪ ಕಾರ್ಯದರ್ಶಿ ಕೃಷ್ಣ ನಾಯಕ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಡಿಡಿಪಿಐ ಕೊಟ್ರೇಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ತಹಶೀಲ್ದಾರ್ ಡಾ.ಅಶ್ವತ್.ಎಂ.ಬಿ ಹಾಗೂ ಇನ್ನಿತರಿದ್ದರು.