ದಾವಣಗೆರೆ.ಅ.24 (Davanagere ): ಒಳ ಮೀಸಲಾತಿ ಜಾರಿಗಾಗಿ ಅಸೃಶ್ಯ ಸಮುದಾಯ ಕಳೆದ 30 ವರ್ಷದಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ. ಅದರೆ, ಒಳಮೀಸಲಾತಿ ವಿಚಾರದಲ್ಲಿ ಸಹೋದರ ಬಂಜಾರ ಸಮಾಜ ನಡೆ ಸರಿಯಲ್ಲ ಎಂದು ದಲಿತ ಸಂಘಟನೆಗಳ ಒಕ್ಕೂಟದ ಹೆಚ್.ಮಲ್ಲೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯ ಮಾದಿಗ ಸಮುದಾಯವು, ವೈಜ್ಞಾನಿಕ ರೀತಿಯಲ್ಲಿ ಒಳ ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದೆ. ಹೋರಾಟದ ಪರಿಣಾಮ ರಾಜ್ಯ ಸರ್ಕಾರವು ಸದಾಶಿವ ಆಯೋಗ ರಚಿಸಿ ಅಭಿಪ್ರಾಯವನ್ನು ಪಡೆದು ತದನಂತರ ಉಪ ಸಮಿತಿ ರಚಿಸಿ ವರದಿ ಪಡೆದು ಇದರ ಅನುಷ್ಠಾನ ಕ್ಕಾಗಿ ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದು ಭಾವಿಸಿ ವರದಿ ಅನುಷ್ಠಾನ ಕ್ಕಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದರು.
ದಲಿತ ಸಮುದಾಯದ ಹೋರಾಟದ ಫಲವಾಗಿ ದಿನಾಂಕ: 01-08-2024 ರಂದು ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ಒಳ ಮೀಸಲಾತಿಯ ಉಪ ವರ್ಗೀಕರಣದ ಅಗತ್ಯ ಮತ್ತು ಒಳ ಮೀಸಲಾತಿ ವರ್ಗೀಕರಣ ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಐತಿಹಾಸಿಕ ತೀರ್ಪನ್ನು ನೀಡಿದೆ. ಈ ತೀರ್ಪಿನ ಅನುಷ್ಠಾನ ವು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
Read also : Davanagere | ಶ್ರೀಗಂಧದ ಮರ ಕಳವು : ಆರೋಪಿ ಬಂಧನ
ವಿನಾಕಾರಣ ಬಂಜಾರ ಸಮುದಾಯ ಸರ್ಕಾರದ ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ ಸಂವಿಧಾನ ಪರಿಚ್ಛೇದ 15(4) 16(4)ರನ್ವಯ ಸಮಾನ ಸೌಲಭ್ಯ ಹಂಚಿಕೊಳ್ಳುವ ನಿಟ್ಟಿನಲ್ಲಿರುವ ನಾವೆಲ್ಲರೂ ಇರಬೇಕಾಗುತ್ತದೆ. ನಿಮ್ಮಲ್ಲಿರುವ ಅಂಕಿ-ಅಂಶಗಳು ಇದ್ದರೇ ಸರ್ಕಾರಕ್ಕೆ ನೀಡಿ. ಈಗಾಗಲೇ 20211ರ ಜನಸಂಖ್ಯೆ ಅನುಗುಣವಾಗಿ ಶೇಕಡವಾರು ಮೀಸಲು ನಿಗದಿಪಡಿಸಿದ್ದು ಆ ಎಲ್ಲಾ ದತ್ತಾಂಶಗಳು ಸರ್ಕಾರದ ಬಳಿ ಇದೆ. ಅದರ ಆಧಾರದ ಮೇಲೆ ಇವತ್ತು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ನಾವೆಲ್ಲರೂ ಬದ್ಧತೆಯಿಂದ ಇರಬೇಕು. ಅಸ್ಪೃಶ್ಯತೆ ನೋವು ಅನುಭವಿಸಿದ ಅನುಭವ ನಿಮಗೆ ಇಲ್ಲ. ಆದಾಗ್ಯೂ ನಿಮ್ಮನ್ನು ಸಹೋದರತ್ವದ ಸಾಮರಸ್ಯದೊಂದಿಗೆ 101 ಜಾತಿಗೂ ಒಳಮೀಸಲಾತಿ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಒಳಮಿಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮುತ್ತಣ್ಣ, ದುಗ್ಗಪ್ಪ, ರವಿಕುಮಾರ್, ರಾಘವೇಂದ್ರ ಕಡೇಮನಿ, ರಾಜಕುಮಾರ್, ನಾಗರಾಜ, ಜಯಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.