ದಾವಣಗೆರೆ : ರಾಜ್ಯದ 31 ಜಿಲ್ಲೆಗಲ್ಲಿ 30 ಜಿಲ್ಲೆಗಳು ತಿರುಗಿ ನೋಡುವಂತಹ ಸಂಸ್ಕೃತಿ, ಸಾಂಸ್ಕೃತಿಕ ಲೋಕವನ್ನು ಹೊಂದಿರುವಂತಹ ಜಿಲ್ಲೆ ಅಂದರೆ ಅದು ದಾವಣಗೆರೆ ಎಂದು ಬೆಂಗಳೂರಿನ ಜನನಿ ಫೌಂಡೇಷನ್ನ ಸಂಸ್ಥಾಪಕ, ಸಾಹಿತಿ ನಾಗಲೇಖ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರಿಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾಪನ ದಿಂದ ನಡೆದ ಆಯೋಜಿಸಿದ್ದ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಅಪ್ಪ ಅಮ್ಮ ಬೆವರನ್ನು ಸುರಿಸಿ ನಿಮ್ಮ ಶೈಕ್ಷಣಿಕ ಪ್ರಗತಿಗೆ ಬಹಳಷ್ಟು ಶ್ರಮಪಡುತ್ತಿದ್ದಾರೆ. ಅವರು ಯಾವುದೇ ಆಸೆಗಳನ್ನು ಇಟ್ಟುಕೊಂಡಿರುವುದಿಲ್ಲ. ನಮ್ಮ ಮಕ್ಕಳು ಚೆನ್ನಾಗಿ ಓದಿ ಹೆಸರು ಕೀರ್ತಿ ತರುವಂತಾಗಲಿ, ಸಮಾಜದಲ್ಲಿ ಒಬ್ಬ ಒಳ್ಳೆಯ ಸತ್ಪ್ರಜೆಯಾಗಿ ಬಾಳಲಿ ಎಂದು ಆಶಿಸುತ್ತಾರೆ. ಗುರು, ತಂದೆ-ತಾಯಿ ಇವರಿಗೆ ಯಾವತ್ತೂ ನೋವು ಮಾಡುವಂತಹ ಕೆಲಸವನ್ನು ಮಾಡಬೇಡಿ. ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯ ಅಲ್ಲ, ಬದುಕಿದ್ದಂತಹ ದಿನಗಳಲ್ಲಿ ಎಷ್ಟುಒಳ್ಳೆ ಕೆಲಸ ಮಾಡುತಿವಿ ಎನ್ನುವುದು ಮುಖ್ಯ. ಅದಕ್ಕೆ ಸಾಕ್ಷಿ ನಟ ಪುನಿತ್ ರಾಜಕುಮಾರ್ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ 108 ವರ್ಷಗಳಾಗಿವೆ. ಇಂತಹ ಜಿಲ್ಲಾ, ರಾಜ್ಯಮಟ್ಟದ ಪುರಸ್ಕಾರಗಳನ್ನು ಸಾಹಿತ್ಯ ಪರಿಷತ್ ಮಾಡಬೇಕು, ಅಂತಹದರಲ್ಲಿ ಕಲಾಕುಂಚ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಬಡತನ ಶಿಕ್ಷಣಕ್ಕೆ ಎಂದಿಗೂ ಕೂಡಾ ಅಡ್ಡಿಯಾಗುವುದಿಲ್ಲ. ಉತ್ತಮ ಶಿಕ್ಷಣ ಪಡೆದು ನಿಮ್ಮ ನಾಡಿಗೆ ಕೀರ್ತಿ ತನ್ನಿ ಎಂದು ಕರೆ ನೀಡಿದರು.
ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ ಶೆಣೈ, ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಕೇರಳ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ, ವಸಂತಿ ಮಂಜುನಾಥ, ರಾಜ್ಯದ ಶೈಕ್ಷಣಿಕ ಸಾಧಕಿ ಟಿ.ಎಸ್.ಭಾವನ ಸೇರಿದಂತೆ ಇತರರು ಇದ್ದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.