ನಾನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿದ್ದಾಗ ನಡೆದ ಘಟನೆಯಿದು. ಆಗ ದೇಶದ ತುಂಬಾ ದೇಶಪ್ರೇಮ ಉಕ್ಕಿ ಹರಿಯುತ್ತಿದ್ದ ಕಾಲ. ಪುಲ್ವಾಮಾ ದಾಳಿಯಲ್ಲಿ ಹತರಾದ ವೀರಯೋಧರ ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಅಶೋಕ ಸರ್ಕಲ್ಲಿನ ಬಳಿ ಹಮ್ಮಿಕೊಳ್ಳಲಾಗಿತ್ತು.
ಆ ಕಾರ್ಯಕ್ರಮವು ಸಂಜೆ ಕತ್ತಲಾದ ನಂತರ ಆಚರಿಸಲು ನಿರ್ಧರಿತವಾಗಿತ್ತು.ಇಡೀ ಊರಿಗೆ ಊರೇ ಭಾವುಕತೆಯ ಸನ್ನಿವೇಶಕ್ಕೆ ಸಾಕ್ಷಿಯಾಗಿರುವಂತೆ ತೋರುತ್ತಿತ್ತು. ಎಲ್ಲಾ ಜಾತಿ,ಧರ್ಮಗಳನ್ನು ಮೀರಿಯೂ ಊರ ಜನರನ್ನು ಒಗ್ಗೂಡಿಸುವ ಕೆಲಸವಿದು ಎಂದು ಜನ ಕೂಡ ಭಾರವಾದ ಹೃದಯಗಳೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು.
ಕತ್ತಲಾಗುತ್ತಿದ್ದಂತೆ ಅಶೋಕ ಸರ್ಕಲ್ಲಿನಲಿ ಮೇಣದ ಬತ್ತಿಗಳು ಬೆಳಗಿದವು ಹೃದಯಗಳು ಕರಗಿದವು.
ಬೆಳಕಿಗೆ
ಧರ್ಮವಿಲ್ಲ,
ಜಾತಿಯಿಲ್ಲ
ಮತವಿಲ್ಲ
ಭೇದವಿಲ್ಲ,
ಎಂಬುದೆಲ್ಲ
ಸುಳ್ಳೆಂದು
ಸಾಬೀತಾಯಿತು
ಅಲ್ಲಿ ಹಾಕಲಾದ ಪ್ಲೆಕ್ಸ್ ನಲ್ಲಿ, ನತದೃಷ್ಟ ಹತರ ನಲವತ್ತನಾಲ್ಕು ಚಿತ್ರಪಟಗಳ ಪೈಕಿ
ಒಬ್ಬ ಹತ ಭಾಗ್ಯ ವಿಂಗ್ ಕಮಾಂಡರನ ಪಟವಿರಲಿಲ್ಲ.
ಯಾಕೆ..?
ಎಂದು ಕೇಳಿದೆ.
“ಹೇ….ಆತ ಅನ್ಯಧರ್ಮದವ ನಂತಲ್ಲ ಸರ್ ಅದಕ್ಕೆ, ಅವನ ಫೋಟೋ ಹಾಕಿಸಿಲ್ಲ!”ಎಂದರು.
“ಆತ ಕೂಡ ಈ ದೇಶದ ರಕ್ಷಣೆಗಾಗಿ ಹೋರಾಡಿದವನಲ್ಲವೇ?”
ಈ ಬಾರಿ ನನ್ನ ಮಾತನ್ನು ಯಾರೂ ಕೂಡ ಕೇಳಿಸಿಕೊಳ್ಳಲು ತಯಾರಿರಲಿಲ್ಲ.
ಯಾರೋ
ಅಳುತಿರುವ ಸದ್ದೂ ಕೇಳಿಸುತ್ತಿತ್ತು..
ನನ್ನ ದೇಶ
ಯಾರನ್ನೋ
ಕಳೆದುಕೊಳ್ಳುತ್ತಿರುವಂತೆ
ಹೊರಗೆ ನೂಕುತ್ತಿರುವಂತೆ ಕಂಡಿತು
ಅಳುವ ಸದ್ದು ಬರುವುದೆಲ್ಲಿಂದ ನೋಡಿದೆ…….
ಸರ್ಕಲ್ಲಿನಲಿ ನಿಂತ ಮುದುಕ ಕಾಣಿಸಿದ.