ದೇಶದ ಆರ್ಥಿಕತೆಯನ್ನು ಅಮೂಲಾಗ್ರವಾಗಿ ಬದಲಾಯಿಸಿ, ಜನತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದ ಕೀರ್ತಿ 1969 ಜುಲೈ 19 ರಂದು ಕೇಂದ್ರ ಸರ್ಕಾರದಿಂದ ಘೋಷಣೆಯಾದ “ಬ್ಯಾಂಕ್ ರಾಷ್ಟ್ರೀಕರಣ” ಕ್ಕೆ ಸಲ್ಲುತ್ತದೆ. ಅಂದು ಪ್ರಧಾನಿಗಳಾಗಿದ್ದ ದಿವಂಗತ ಇಂದಿರಾ ಗಾಂಧಿಯವರು ತೆಗೆದುಕೊಂಡ ಐತಿಹಾಸಿಕ ನಿರ್ಧಾರದ ಫಲವಾಗಿ ಬ್ಯಾಂಕಿಂಗ್ ಸೌಲಭ್ಯ ಮತ್ತು ಸೇವೆ ದೇಶದ ಮೂಲೆ ಮೂಲೆಗೆ ತಲುಪುವಂತಾಯಿತು.
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಲಕ್ಷಾಂತರ ವಿದ್ಯಾವಂತರಿಗೆ ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶವನ್ನು ನೀಡಿತು. ಕೋಟ್ಯಾಂತರ ದೇಶವಾಸಿಗಳಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ರಹದಾರಿಯನ್ನು ಕಲ್ಪಿಸಿತು. ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಲ ಸೌಲಭ್ಯ ಸಿಗುವಂತಾಯಿತು.
ವ್ಯವಹಾರಸ್ಥರಿಗೆ ತಮ್ಮ ವಹಿವಾಟುಗಳನ್ನು ಗಣನೀಯವಾಗಿ ವೃದ್ಧಿಸಿಕೊಳ್ಳಲು ಸಹಕಾರಿಯಾಯಿತು. ಯುವಕರಿಗೆ, ಮಹಿಳೆಯರಿಗೆ, ರೈತರಿಗೆ ಹೊಸ ಆಶಾಕಿರಣದ ಉದಯವಾಯಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ತಮ್ಮ ದುಡಿಮೆಯ ಉಳಿಕೆಯ ಪಾಲನ್ನು ಸರ್ಕಾರಿ ಒಡೆತನದ ಬ್ಯಾಂಕುಗಳಲ್ಲಿ ಇಟ್ಟರೆ ಹೆಚ್ಚು ಸುರಕ್ಷಿತ ಎನ್ನುವ ಆತ್ಮವಿಶ್ವಾಸ ಬರಲು ಸಾಧ್ಯವಾಯಿತು.
1969 ರ ಜುಲೈ 19 ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕುಗಳನ್ನು ಹಾಗೂ ತರುವಾಯ 1980 ರ ಏಪ್ರಿಲ್ 15 ರಂದು ಮತ್ತೆ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಸರ್ಕಾರದ ಒಡೆತನಕ್ಕೆ ಸೇರ್ಪಡೆಗೊಳಿಸಲಾಯಿತು.
ದಿ.ಶ್ರೀಮತಿ ಇಂದಿರಾ ಗಾಂಧಿಯವರ ನಿರ್ಧಾರ ಐತಿಹಾಸಿಕ (Indira Gandhi)
1969 ರಲ್ಲಿ ಕೇಂದ್ರ ಸರ್ಕಾರದ ನೇತೃತ್ವವನ್ನು ವಹಿಸಿದ್ದ ಅಂದಿನ ಪ್ರಧಾನಿಗಳಾಗಿದ್ದಂತಹ ದಿವಂಗತ ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣದ ಧೀರೋದಾತ್ತ ನಿರ್ಧಾರವನ್ನು ಯಾರಾದರೂ ಮೆಚ್ಚಲೇಬೇಕಾದದ್ದು. ಏಕೆಂದರೆ ಆ ಸಂದರ್ಭದಲ್ಲಿ ಖಾಸಗಿ ಬ್ಯಾಂಕುಗಳು ಬೃಹತ್ ಮತ್ತು ಪ್ರಭಾವಿ ಬಂಡವಾಳಶಾಹಿಗಳ ಬಿಗಿಮುಷ್ಠಿಯಲ್ಲಿತ್ತು. ಟಾಟಾ ಕುಟುಂಬವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವನ್ನು, ಬಿರ್ಲಾ ಕುಟುಂಬವು ಯುಕೋ ಬ್ಯಾಂಕನ್ನು, ದಾಲ್‌ಚಂದ್ ಹೀರಾಚಂದ್ ಕುಟುಂಬವು ಬ್ಯಾಂಕ್ ಆಫ್ ಬರೋಡಾವನ್ನು, ಚೆಟ್ಟಿಯಾರ್ ಕುಟುಂಬವು ಇಂಡಿಯನ್ ಬ್ಯಾಂಕನ್ನು, ಮಣಿಪಾಲದ ಪೈ ಕುಟುಂಬವು ಸಿಂಡಿಕೇಟ್ ಬ್ಯಾಂಕನ್ನು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯವು ವಿಜಯಾ ಬ್ಯಾಂಕನ್ನು ಸ್ಥಾಪಿಸಿ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿದ್ದರು.
ಅವರೆಲ್ಲರ ತೀವ್ರ ವಿರೋಧವನ್ನು ಲೆಕ್ಕಿಸದೇ ದಿವಂಗತ ಇಂದಿರಾ ಗಾಂಧಿಯವರು ತೆಗೆದುಕೊಂಡ ಬ್ಯಾಂಕ್ ರಾಷ್ಟ್ರೀಕರಣದ ನಿರ್ಧಾರ ನಿಜಕ್ಕೂ ಐತಿಹಾಸಿಕವಾದುದು. ಇಡೀ ದೇಶ ಈ ನಿರ್ಧಾರವನ್ನು ಬೆಂಬಲಿಸಿತು ಮತ್ತು ಕೊಂಡಾಡಿತು. ಜಾಗತಿಕ ಮಟ್ಟದಲ್ಲೂ ಇದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ದೇಶದ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸ್ವರೂಪವನ್ನೇ ಅಮೂಲಾಗ್ರವಾಗಿ ಬದಲಾಯಿಸಿತು. ಗ್ರಾಮೀಣ ಭಾಗದಲ್ಲಿ ಸಾವಿರಾರು ಬ್ಯಾಂಕ್ ಶಾಖೆಗಳು ತೆರೆಯಲ್ಪಟ್ಟವು. ದೇಶದ ಜನತೆಯ ಉಳಿತಾಯದ ಹಣಕ್ಕೆ ಭದ್ರತೆ ಮತ್ತು ಸುರಕ್ಷೆ ಸಿಕ್ಕಿತು. ಖಾಸಗೀ ಬ್ಯಾಂಕುಗಳಿಂದ ಸಾಲ ನೀಡುವಲ್ಲಿ ಯಾವ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತೋ ಅವು ಸಾಲ ವಿತರಣೆಯ ಆದ್ಯತಾ ವಲಯದ ಕ್ಷೇತ್ರಗಳಾಗಿ ಪರಿಗಣಿಸಲ್ಪಟ್ಟವು.
ಕೃಷಿ, ಉದ್ಯೋಗ ಸೃಷ್ಠಿ, ಬಡತನ ನಿರ್ಮೂಲನೆ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳು ಮುಂತಾದ ವಲಯಗಳಿಗೆ ಬ್ಯಾಂಕುಗಳು ಹೆಚ್ಚು ಹೆಚ್ಚು ಸಾಲ ನೀಡಲು ಆರಂಭಿಸಿದವು. ದೇಶದ ಆರ್ಥಿಕ ಬೆಳವಣಿಗೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಬಹುದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಲು ಆರಂಭಿಸಿದವು.
1975 ರಲ್ಲಿ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. 1982 ರಲ್ಲಿ ನಬಾರ್ಡ್ ಹಾಗೂ ಎಕ್ಸಿಮ್ ಬ್ಯಾಂಕುಗಳ ಸ್ಥಾಪನೆಯಾಯಿತು. ಲೀಡ್‌ಬ್ಯಾಂಕ್ ವ್ಯವಸ್ಥೆ ಸಾಕಾರಗೊಂಡಿತು. ದತ್ತು ಗ್ರಾಮ ಯೋಜನೆ ಅಸ್ತಿತ್ವಕ್ಕೆ ಬಂದಿತು. ಹೀಗೆ ಹತ್ತು ಹಲವಾರು ಯೋಜನೆಗಳ ಮೂಲಕ ಹಣಕಾಸು ಸೇವಾ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಬ್ಯಾಂಕ್ ರಾಷ್ಟ್ರೀಕರಣವೇ ಮುನ್ನುಡಿಯಾಗಿತ್ತು ಎನ್ನುವುದು ಅತ್ಯಂತ ಗಮನಾರ್ಹ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ – ಬ್ಯಾಂಕ್ ರಾಷ್ಟ್ರೀಕರಣದ ಚಾಂಪಿಯನ್ (AIBEA)
ರಾಷ್ಟ್ರೀಕರಣದ ರೂವಾರಿಗಳು ಎಂದು ನಾವು ಹೇಗೆ ದಿವಂಗತ ಇಂದಿರಾ ಗಾಂಧಿಯವರನ್ನು ಸ್ಮರಿಸುತ್ತೇವೆಯೋ ಅದೇ ರೀತಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಸುದೀರ್ಘವಾದ ಎರಡು ದಶಕಗಳ ಹೋರಾಟ ಮಾಡಿದ ಕೀರ್ತಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(AIBEA) ಕ್ಕೆ ಸಲ್ಲುತ್ತದೆ.
1947 ರಲ್ಲಿ ಉದಯವಾದ ಈ ಸಂಘಟನೆಯು ಬ್ಯಾಂಕ್ ರಾಷ್ಟ್ರೀಕರಣದ ವಿಷಯವನ್ನು ಕೈಗೆತ್ತಿಕೊಂಡು, ಆ ಕುರಿತಾಗಿ ಬೇಡಿಕೆಯಿಟ್ಟು, ಅದನ್ನು ಸಾಕಾರಗೊಳಿಸಲು ಆಂದೋಲನವನ್ನು ಆರಂಭಿಸಿ, ಹೋರಾಟ ಮಾಡಿದ ಏಕೈಕ ಬ್ಯಾಂಕ್ ಕಾರ್ಮಿಕ ಸಂಘಟನೆ. ಆದ ಕಾರಣ “ಬ್ಯಾಂಕ್ ರಾಷ್ಟ್ರೀಕರಣದ ಚಾಂಪಿಯನ್” ಎಂಬ ಹೆಗ್ಗಳಿಕೆಗೆ “ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ”(AIBEA) ಪಾತ್ರವಾಯಿತು.
ಸಂಘದ ಸದಸ್ಯರು, ಹಿತೈಷಿಗಳು, ಎಡಪಂಥೀಯ ಹೋರಾಟಗಾರರು, ಆರ್ಥಿಕ ತಜ್ಞರು, ಪತ್ರಕರ್ತರು, ಪುರೋಗಾಮಿ ಗುಂಪುಗಳು, ಜನಪರ ಸಂಘಟನೆಗಳು, ಎಐಟಿಯುಸಿ ನೇತೃತ್ವದ ಕಾರ್ಮಿಕ ವರ್ಗ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಚಳುವಳಿಯನ್ನು ನಡೆಸಿತ್ತು.
477 ಖಾಸಗೀ ಬ್ಯಾಂಕುಗಳು ಬಂದ್
ಎಐಬಿಇಎ ಸದಸ್ಯರು ಸಂಸತ್ತಿನ ಹೊರಗೆ ಪ್ರತಿಭಟನೆ, ಚಳುವಳಿಗಳನ್ನು ನಡೆಸುತ್ತಿದ್ದರೆ ಅತ್ತ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ 1957 ರಿಂದ 1967 ರವರೆಗೆ ಸಂಸತ್ ಸದಸ್ಯರಾಗಿದ್ದ ದಿವಂಗತ ಕಾಮ್ರೇಡ್ ಪ್ರಭಾತ್ ಕಾರ್‌ರವರು ಸಂಸತ್ತಿನ ಒಳಗೆ ಬ್ಯಾಂಕ್ ರಾಷ್ಟ್ರೀಕರಣದ ಅಗತ್ಯವನ್ನು ಸರ್ಕಾರಕ್ಕೆ ಮನದಟ್ಟು ಮಾಡುತ್ತಿದ್ದರು. ಇದರ ನಡುವೆ 1947 ಮತ್ತು 1969 ರ ಮಧ್ಯಕಾಲದಲ್ಲಿ ಸಾಲುಸಾಲಾಗಿ 477 ಖಾಸಗೀ ಬ್ಯಾಂಕುಗಳು ಮುಚ್ಚಲ್ಪಟ್ಟವು.
ಇದು ಆತಂಕಕ್ಕೆ ಮತ್ತು ಅನುಮಾನಕ್ಕೆ ಕಾರಣವಾಯಿತು. ಖಾಸಗಿ ವ್ಯಕ್ತಿಗಳು ಸ್ಥಾಪಿಸುವ ಬ್ಯಾಂಕುಗಳು ಅವರ ಖಾಸಗಿ ವ್ಯವಹಾರಗಳಿಗೆ ಮಾತ್ರ ಬಳಕೆಯಾಗುತ್ತಿತ್ತೇ ವಿನಹ ದೇಶದ ಏಳಿಗೆಗಾಗಿ ಅಲ್ಲ ಎನ್ನುವುದನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಿತು.
ಇದೆಲ್ಲದರ ಫಲವಾಗಿ 1969 ರಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಬ್ಯಾಂಕ್ ರಾಷ್ಟ್ರೀಕರಣ ಹೋರಾಟದಲ್ಲಿ ಆಗ ಮುಂಚೂಣಿಯಲ್ಲಿದ್ದ ನಮ್ಮ ರಾಜ್ಯದ ಕಾಮ್ರೇಡ್ ಪಿ.ಎಸ್.ಸುಂದರೇಶನ್ ಹಾಗೂ ಕಾಮ್ರೇಡ್ ಹೆಚ್.ವಸಂತ ರೈ ಈಗಲೂ ಬ್ಯಾಂಕಿಂಗ್ ಚಳುವಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಬ್ಯಾಂಕುಗಳು ಅಂದು-ಇಂದು: (bank)
1969 ರಲ್ಲಿ ಒಂದು ಲಕ್ಷದಷ್ಟಿದ್ದ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ ಇಂದು ಒಂದು ಮಿಲಿಯನ್ ಗಡಿ ಮುಟ್ಟಿದೆ. 8200 ರಷ್ಟು ಇದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ ಇಂದು 1,50,000 ರ ಗಡಿ ದಾಟಿದೆ. ರೂ.5000 ರಷ್ಟು ಇದ್ದ ಠೇವಣಿಯ ಪ್ರಮಾಣ ಇಂದು ರೂ.175 ಲಕ್ಷ ಕೋಟಿಯಾಗಿದೆ.
ರೂ.3500 ಕೋಟಿಯಷ್ಟು ಇದ್ದ ಸಾಲ ನೀಡುವಿಕೆಯ ಪ್ರಮಾಣ ಇಂದು ರೂ.110 ಲಕ್ಷ ಕೋಟಿಯಷ್ಟಾಗಿದೆ. 1969 ರ ಪೂರ್ವದಲ್ಲಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಇರದೇ ಇದ್ದಂತಹ ಬ್ಯಾಂಕ್ ಶಾಖೆಗಳು ಇಂದು ಆ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಶಾಖೆಗಳು ಇವೆ. ಆದ್ಯತಾ ವಲಯಕ್ಕೆ ಸಾಲವನ್ನೇ ನೀಡಿರದಿದ್ದ ಬ್ಯಾಂಕುಗಳು ಇಂದು ಒಟ್ಟು ಸಾಲ ನೀಡುವಿಕೆಯಲ್ಲಿ ಶೇ.40 ರಷ್ಟು ಸಾಲವನ್ನು ಆ ವಲಯಕ್ಕೆ ಮೀಸಲಾಗಿರಿಸುತ್ತಿವೆ.
ಈ ಅಂಕಿ ಅಂಶಗಳ ಮೂಲಕ ನಾವು ಬ್ಯಾಂಕ್ ರಾಷ್ಟ್ರೀಕರಣದ ಮಹತ್ವವನ್ನು ಅರಿಯಬಹುದಾಗಿದೆ. ಬ್ಯಾಂಕುಗಳ ಮುಖವನ್ನೇ ನೋಡದ ಗ್ರಾಮೀಣ ಪ್ರದೇಶದ ಜನರು, ರೈತರು, ಕುಶಲಕರ್ಮಿಗಳು, ನಿರುದ್ಯೋಗಿ ವಿದ್ಯಾವಂತರು, ಅನಕ್ಷರಸ್ಥರು, ಆರ್ಥಿಕ ದುರ್ಬಲರು, ಕಾರ್ಮಿಕರು, ದಿನಗೂಲಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಶೋಷಿತರು, ದಮನಿತರು ಇಂದು ಹೆಮ್ಮೆಯಿಂದ ಬ್ಯಾಂಕಿಂಗ್ ಸೌಲಭ್ಯವನ್ನು ಅನುಭವಿಸುವಂತಾಗಿದೆ ಮತ್ತು ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. “ನಮ್ಮ ದೇಶ-ನಮ್ಮ ಬ್ಯಾಂಕು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಕ್ಲಾಸ್ ಬ್ಯಾಂಕಿಂಗ್ ವ್ಯವಸ್ಥೆ ಮಾಸ್ ಬ್ಯಾಂಕಿಂಗ್ ವ್ಯವಸ್ಥೆಯಾಗಿ ಪರಿವರ್ತಿತವಾಯಿತು. ಇದು ಬ್ಯಾಂಕ್ ರಾಷ್ಟ್ರೀಕರಣದ ಅಪ್ರತಿಮ ಸಾಧನೆ.
ಸರ್ಕಾರಿ ಬ್ಯಾಂಕುಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು(Burning issues)
ಪ್ರಸ್ತುತ ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕಿಂಗ್ ಕ್ಷೇತ್ರವು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಯಾವ ಕಾಂಗ್ರೆಸ್ ನೇತೃತ್ವದ ಸರ್ಕಾರ 1969 ಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿತ್ತೋ ಅದೇ ಕಾಂಗ್ರೆಸ್ ಪಕ್ಷ ದ ನೇತೃತ್ವದ ಸರ್ಕಾರ 1991 ನಂತರದ ವರ್ಷಗಳಲ್ಲಿ ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ “ರಾಷ್ಟ್ರೀಕರಣ” ನೀತಿಯನ್ನೇ ಬುಡ ಮೇಲಾಗಿಸುವ ಕೆಲಸಕ್ಕೆ ಅಡಿಗಲ್ಲು ಹಾಕಿದ್ದು ದುರಂತ ಎಂತಲೇ ಹೇಳಬಹುದು.
1991 ರ ನಂತರದ ಕಾಲದಲ್ಲಿ ಬಂದಂತಹ ಎಲ್ಲ ಸರ್ಕಾರಗಳು ಬ್ಯಾಂಕ್ ರಾಷ್ಟ್ರೀಕರಣ ನೀತಿಯನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸುತ್ತಿವೆ. ಇದು ಖಂಡಿತವಾಗಿಯೂ ಆಕ್ಷೇಪಣೀಯ. ಸರ್ಕಾರೀ ಒಡೆತನದ ಬ್ಯಾಂಕುಗಳಲ್ಲಿನ ಸರ್ಕಾರದ ಬಂಡವಾಳದ ಹಿಂತೆಗೆತ, ಬ್ಯಾಂಕುಗಳಲ್ಲಿ ವಿದೇಶೀ ಬಂಡವಾಳದ ಒಳಹರಿವು, ಖಾಸಗೀಕರಣದ ಹುನ್ನಾರ, ಬ್ಯಾಂಕುಗಳ ಅವೈಜ್ಞಾನಿಕ ವಿಲೀನ ಪ್ರಕ್ರಿಯೆ, ಬ್ಯಾಂಕುಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಯನ್ನು ಮಾಡದೇ ಇರುವುದು, ಹೊಸ ತಲೆಮಾರಿನ ಗ್ರಾಹಕರ ಅಗತ್ಯಗಳಿಗೆ ತಕ್ಕನಾಗಿ ಸೇವೆಯನ್ನು ಮೇಲ್ದರ್ಜೆಗೆ ಏರಿಸಲು ಅನಗತ್ಯ ವಿಳಂಬ ಮಾಡುತ್ತಿರುವುದು,
ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆ ಜರ್ಝರಿತ (bank)
ಖಾಸಗೀ ಕಂಪನಿಗಳಿಗೆ ಬ್ಯಾಂಕ್‌ಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು, ಅಂಚೆ ಸೇವೆಯಲ್ಲಿ ವಿಫಲತೆಯನ್ನು ಕಾಣುತ್ತಿರುವ ಅಂಚೆ ಕಛೇರಿಗಳಿಗೆ ಬ್ಯಾಂಕನ್ನು ಆರಂಭಿಸಲು ಅನುಮತಿ ನೀಡಿರುವುದು ಮುಂತಾದ ಹತ್ತು ಹಲವು ರಾಷ್ಟ್ರೀಕರಣ ವಿರೋಧಿ ನೀತಿಯಿಂದಾಗಿ ಇಂದು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆ ಜರ್ಝರಿತಗೊಂಡಿದೆ. ಇದರ ನಡುವೆ ವಸೂಲಾಗದ ಕೆಟ್ಟ ಸಾಲದ ಪ್ರಮಾಣ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ.
ಸಾಲ ವಸೂಲಾತಿಯು ಕ್ಲಪ್ತ ಸಮಯದಲ್ಲಿ ಆಗದೇ ಹೋದಲ್ಲಿ ಬ್ಯಾಂಕಿನ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಇದರಿಂದ ಬ್ಯಾಂಕಿನ ಮೇಲೆ ಸಾರ್ವಜನಿಕರಿಗಿರುವ ವಿಶ್ವಾಸಾರ್ಹತೆ ಕುಂಠಿತಗೊಳ್ಳುತ್ತದೆ. 2015 ರವರೆಗೆ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭವನ್ನು ಗಳಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು (2015 ರಲ್ಲಿ ದೇಶದ ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟಾರೆ ನಿರ್ವಹಣಾ ಲಾಭ ರೂ.137817.00 ಕೋಟಿಗಳಷ್ಟಿತ್ತು) ಒಮ್ಮಿಂದೊಮ್ಮೆಲೇ ನಷ್ಟವನ್ನು ತೋರಿಸಲು ಆರಂಭಿಸಿದವು.
ಇದಕ್ಕೆ ಕಾರಣ ದೇಶದ ಖಾಸಗೀ ಬೃಹತ್ ಬಂಡವಾಳಶಾಹಿಗಳು ತಾವು ತೆಗೆದುಕೊಂಡ ಕೋಟ್ಯಾಂತರ ರೂಪಾಯಿಗಳ ಸಾಲವನ್ನು ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದಿರುವುದು.
ಸಾಲ ಮರುಪಾವತಿ ಮಾಡಲು ಸಮರ್ಥರಿರುವವರೆ ಸಾಲಮನ್ನಾ, ಬಡ್ಡಿಮನ್ನಾ ಮುಂತಾದ ಯೋಜನೆಗಳತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಬ್ಯಾಂಕುಗಳು ಹಾಗೂ ಸರ್ಕಾರಗಳು ಕಳೆದೊಂದು ದಶಕಗಳಲ್ಲಿ ಸುಮಾರು ಲಕ್ಷಾಂತರ ಕೋಟಿಗಳಷ್ಟು ಪ್ರಮಾಣದ ಸಾಲವನ್ನು ಮನ್ನಾ ಮಾಡಿದ್ದಾರೆ. ಇದನ್ನು ಸರಕಾರವೇ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ. ಬ್ಯಾಂಕುಗಳು ಗಳಿಸುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭಾಂಶವನ್ನು ಖಾಸಗೀ ಬಂಡವಾಳಶಾಹಿಗಳು ಲೂಟಿ ಮಾಡುತ್ತಿದ್ದಾರೆ.
ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕೆ (AIBEA)
ಈ ಬೆಳವಣಿಗೆಗಳ ವಿರುದ್ಧ ಮೂರು ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಉದ್ಯೋಗಿಗಳ ಸದಸ್ಯತ್ವವನ್ನು ಹೊಂದಿರುವ ವಿಶ್ವದ ಅತೀ ದೊಡ್ಡ ಬ್ಯಾಂಕ್ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. “ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕೆ ಬಳಕೆಯಾಗಬೇಕೇ ಹೊರತು ಖಾಸಗೀ ಕಂಪನಿಗಳ ಲೂಟಿಗಾಗಿ ಅಲ್ಲ” ಎನ್ನುವುದು ಸಂಘದ ಧ್ಯೇಯವಾಗಿದೆ.
ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಉಳಿಸುವುದಕ್ಕಾಗಿ ಹೋರಾಟ
ಅಖಿಲಭಾರತ ಬ್ಯಾಂಕ್ ನೌಕರರ ಸಂಘ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಹೆಚ್.ವೆಂಕಟಾಚಲಂ ಮತ್ತು ರಾಜ್ಯ ಅಧ್ಯಕ್ಷ ಎಂ.ಎಸ್.ಶ್ರೀನಿವಾಸನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಎಂ.ಜಯನಾಥ್ ಅವರುಗಳ ನೇತೃತ್ವದಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಹಲವಾರು ಹೋರಾಟಗಳನ್ನು ರೂಪಿಸುತ್ತಿದೆ.
ರಾಷ್ಟ್ರೀಕರಣ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಬಲಪಡಿಸಿ
ಕೇಂದ್ರ ಸರ್ಕಾರವು ಸಾಲ ವಸೂಲಾತಿಗಾಗಿ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕು, ಸಾಲ ಮರುಪಾವತಿ ಮಾಡದವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು, ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು, ಅವರ ಆಸ್ತಿಗಳನ್ನು ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವುದು ಹೋರಾಟದ ಪ್ರಮುಖ ಬೇಡಿಕೆಗಳಾಗಿವೆ.
ದೇಶದ 638000 ಹಳ್ಳಿಗಳ ಪೈಕಿ ಇಂದಿಗೂ ಕೇವಲ 35000 ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಅಂದರೆ ಪ್ರಸ್ತುತ 20 ಹಳ್ಳಿಗಳಿಗೆ ಒಂದರಂತೆ ಬ್ಯಾಂಕ್ ಶಾಖೆಯ ಸೌಲಭ್ಯವಿದೆ. ಈ ಅಸಮತೋಲನವನ್ನು ಹೋಗಲಾಡಿಸಬೇಕಾದರೆ ರಾಷ್ಟ್ರೀಕರಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು, ಸದೃಢಗೊಳಿಸಬೇಕು ವಿಸ್ತಾರಗೊಳಿಸಬೇಕು, ಜನಸಾಮಾನ್ಯರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಬೇಕೇ ವಿನಃ ಖಾಸಗೀಕರಣಗೊಳಿಸುವುದಲ್ಲ. ಇದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕು.
ನಾಗರೀಕನ ಮೂಲಭೂತ ಹಕ್ಕು
ಜೊತೆಗೆ ಯಾವುದೇ ಹಂತದಲ್ಲೂ ದೇಶದ ಅಭಿವೃದ್ಧಿಗೆ ಸಹಕರಿಸದ, ದೇಶದ ಕಷ್ಟದ ಸಮಯದಲ್ಲಿ ಕೈಜೋಡಿಸದ, ದೇಶದ ಜನರ ಅಗತ್ಯಗಳಿಗೆ ಸ್ಪಂದಿಸದ ಹೊಸ ತಲೆಮಾರಿನ ಖಾಸಗೀ ಬ್ಯಾಂಕುಗಳಿಗೆ ನೀಡುವ ಅನಗತ್ಯ ಪ್ರೋತ್ಸಾಹವನ್ನು ನಿಲ್ಲಿಸಬೇಕಾದ ಅಗತ್ಯವಿದೆ. “ಬ್ಯಾಂಕಿಂಗ್ ಸೌಲಭ್ಯ ಪ್ರತಿಯೊಬ್ಬ ನಾಗರೀಕನ ಮೂಲಭೂತ ಹಕ್ಕಾಗಬೇಕು” ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಈ ಬೇಡಿಕೆ ಸಾಕಾರಗೊಳ್ಳಬೇಕಾದರೆ, ನಮ್ಮ ದೇಶದ ಹೆಮ್ಮೆಯ “ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ” ಇನ್ನಷ್ಟು ಸದೃಢವಾಗಿ ನಮ್ಮ ಮುಂದಿನ ಪೀಳಿಗೆಗೆ ಸಿಗುವಂತಾಗಬೇಕಾದರೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು (AIBEA) ನಡೆಸುತ್ತಿರುವ ಹೋರಾಟದಲ್ಲಿ ಬ್ಯಾಂಕ್ ಉದ್ಯೋಗಿಗಳಷ್ಟೇ ಭಾಗಿಗಳಾದರೆ ಸಾಕಾಗದು. 1969 ರಿಂದ ಬ್ಯಾಂಕ್ ರಾಷ್ಟ್ರೀಕರಣದ ಪ್ರಯೋಜನವನ್ನು ಪಡೆದಿರುವ ಸಾರ್ವಜನಿಕರು ಸಹ ಈ ಹೋರಾಟದಲ್ಲಿ ಸಕ್ರಿಯವಾಗಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ.
ಬನ್ನಿ… ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಇನ್ನಷ್ಟು ಪುನಃಶ್ಚೇತನಗೊಳಿಸಿ ದೇಶವನ್ನು ಕಟ್ಟುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸೋಣ ಮತ್ತು ಬ್ಯಾಂಕ್ ರಾಷ್ಟ್ರೀಕರಣ ವ್ಯವಸ್ಥೆಯನ್ನು ಸಾರ್ಥಕಗೊಳಿಸೋಣ.
-ಕೆ ರಾಘವೇಂದ್ರ ನಾಯರಿ,
ಬ್ಯಾಂಕ್ ಕಾರ್ಮಿಕ ಮುಖಂಡರು,
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ರಿ.),
ಮೊ: 9844314543