ಶಿವಮೊಗ್ಗ, ಜು. 17: ಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಡ್ಯಾಂ ಒಳಹರಿವಿನಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ ಮೂರುವರೆ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.
ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 34,544 ಕ್ಯೂಸೆಕ್ ಗೆ ಏರಿಕೆಯಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಕಂಡುಬಂದ ಅತ್ಯಧಿಕ ಒಳಹರಿವು ಇದಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ 3 ಅಡಿ 9 ಇಂಚು ನೀರು ಸಂಗ್ರಹವಾಗಿದೆ.
ಪ್ರಸ್ತುತ ಡ್ಯಾಂ ನೀರಿನ ಮಟ್ಟ 148 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. 169 ಜಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 141. 4 ಅಡಿ ನೀರು ಸಂಗ್ರಹವಾಗಿತ್ತು.
ಡ್ಯಾಂ ಜಲಾನಯನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ವರ್ಷಧಾರೆಯಾಗುತ್ತಿದೆ. ಇದರಿಂದ ಭದ್ರಾ ಡ್ಯಾಂ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ. ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ಒಳಹರಿವು ಕಂಡುಬಂದರೆ, ಪ್ರಸ್ತುತ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಡ್ಯಾಂ ಭರ್ತಿಯಾಗಲಿದೆ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ಗಳು ಅಭಿಪ್ರಾಯಪಡುತ್ತಾರೆ.