ಶಿವಮೊಗ್ಗ, ಜು. 29 : ಮುಂಗಾರು ಮಳೆ ಮಲೆನಾಡಲ್ಲಿ ಆರ್ಭಟ ತಗ್ಗಿದೆ. ಉಕ್ಕಿ ಹರಿಯುತ್ತಿದ್ದ ನದಿ, ಕೆರೆಕಟ್ಟೆ, ಹಳ್ಳಕೊಳ್ಳಗಳ ನೀರಿನ ಹರಿವಿನಲ್ಲಿಇಳಿಕೆಯಾಗಿದೆ. ಈ ನಡುವೆ ಭದ್ರಾ ಡ್ಯಾಂ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಉಳಿದಂತೆ ಲಿಂಗನಮಕ್ಕಿ, ತುಂಗಾ ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
ಜು. 29 ರ ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ, ಭದ್ರಾ ಜಲಾಶಯದ ಒಳಹರಿವು 18,381 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಡ್ಯಾಂನ ನೀರಿನ ಮಟ್ಟ 181 ಅಡಿ 10 ಇಂಚು ಇದೆ. ಗರಿಷ್ಠ ಮಟ್ಟವಾದ 186 ಅಡಿ ತಲುಪಲು ಇನ್ನೂ ನಾಲ್ಕೂವರೆ ಅಡಿಯಷ್ಟು ನೀರು ಬೇಕಾಗಿದೆ. ಡ್ಯಾಂನಿಂದ 962 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 160. 9 ಅಡಿ ನೀರು ಸಂಗ್ರಹವಾಗಿತ್ತು.
ಭಾನುವಾರಕ್ಕೆ ಹೋಲಿಸಿದರೆ, ತುಂಗಾ ಜಲಾಶಯದ ಒಳಹರಿವಿನಲ್ಲಿ ಕೊಂಚ ಏರಿಕೆ ಕಂಡುಬಂದಿದೆ. 38,086 ಕ್ಯೂಸೆಕ್ ಒಳಹರಿವಿದ್ದು, ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ 34,498 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಉಳಿದಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಕೊಂಚ ಏರಿಕೆ ಕಂಡುಬಂದಿದೆ. 40,382 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1809. 15 (ಗರಿಷ್ಠ ಮಟ್ಟ : 1819) ಅಡಿಯಿದೆ. 3815 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1786. 30 ಅಡಿ ನೀರು ಸಂಗ್ರಹವಾಗಿತ್ತು.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 48 ಮಿ.ಮೀ., ಯಡೂರು 79 ಮಿ.ಮೀ., ಹುಲಿಕಲ್ 61 ಮಿ.ಮೀ., ಮಾಸ್ತಿಕಟ್ಟೆ 87 ಮಿ.ಮೀ., ಚಕ್ರಾ 103 ಮಿ.ಮೀ., ಸಾವೇಹಕ್ಲುವಿನಲ್ಲಿ 156 ಮಿ.ಮೀ. ವರ್ಷಧಾರೆಯಾಗಿದೆ.