ಶಿವಮೊಗ್ಗ, ಜು. 22: ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಿದೆ. ಮತ್ತೊಂದೆಡೆ, ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.
ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 44,387 ಕ್ಯೂಸೆಕ್ ಇದೆ. 1898 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 1797. 60 (ಗರಿಷ್ಠ ಮಟ್ಟ : 1819) ಅಡಿಯಿದೆ. ಡ್ಯಾಂನಲ್ಲಿ ಒಟ್ಟಾರೆ 90. 14 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.
ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಜಲಾಶಯದ ಒಳಹರಿವು 25,367 ಕ್ಯೂಸೆಕ್ ಇದೆ. ಭಾನುವಾರ ಒಳಹರಿವಿನ ಪ್ರಮಾಣ 23 ಸಾವಿರ ಕ್ಯೂಸೆಕ್ ನಷ್ಟಿತ್ತು. ಡ್ಯಾಂನ ನೀರಿನ ಮಟ್ಟ 166. 6 ಅಡಿ (ಗರಿಷ್ಠ ಮಟ್ಟ : 186) ಇದೆ.
ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. ಪ್ರಸ್ತುತ 36,055 ಕ್ಯೂಸೆಕ್ ಒಳಹರಿವಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ 34,150 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗುತ್ತಿದೆ.
ಮಳೆ ವಿವರ : ಜು. 22 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ 68 ಮಿಲಿ ಮೀಟರ್, ಯಡೂರು 78 ಮಿ.ಮೀ., ಹುಲಿಕಲ್ 98 ಮಿ.ಮೀ., ಮಾಸ್ತಿಕಟ್ಟೆ 104 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ 6. 70 ಮಿ.ಮೀ., ಭದ್ರಾವತಿ 7. 50 ಮಿ.ಮೀ., ತೀರ್ಥಹಳ್ಳಿ 36. 10 ಮಿ.ಮೀ., ಸಾಗರ 57 ಮಿ.ಮೀ., ಶಿಕಾರಿಪುರ 20, 80 ಮಿ.ಮೀ., ಸೊರಬ 39. 40 ಮಿ.ಮೀ. ಹಾಗೂ ಹೊಸನಗರದಲ್ಲಿ39. 80 ಮಿ.ಮೀ. ಮಳೆಯಾಗಿದೆ.