ಶಿವಮೊಗ್ಗ, ಜು. 25: ಮಲೆನಾಡಿನಲ್ಲಿ ಇಳಿಕೆಯಾಗಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳಲಾರಂಭಿಸಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಜಲಾಶಯದ ಒಳಹರಿವಿನಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ.
ಗುರುವಾರ ಬೆಳಿಗ್ಗಯ ಮಾಹಿತಿಯಂತೆ, ಭದ್ರಾ ಜಲಾಶಯ ಒಳಹರಿವು 26,044 ಕ್ಯೂಸೆಕ್ ಗೆ ಏರಿಕೆಯಾಗಿದೆ. ಬುಧವಾರ ಈ ಪ್ರಮಾಣ 15,383 ಕ್ಯೂಸೆಕ್ ನಷ್ಟಿತ್ತು. ಕಳೆದ ಮೂರು ದಿನಗಳಿಂದ ಡ್ಯಾಂ ಒಳಹರಿವಿನಲ್ಲಿ ನಿರಂತರ ಇಳಿಕೆ ಕಂಡುಬಂದಿತ್ತು.
ಉಳಿದಂತೆ ಡ್ಯಾಂನ ನೀರಿನ ಮಟ್ಟ 171 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ ಸರಿಸುಮಾರು ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 152. 9 ಅಡಿ ನೀರು ಶೇಖರಣೆಯಾಗಿತ್ತು.
ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಹದಿನಾಲ್ಕುವರೆ ಅಡಿಯಷ್ಟು ನೀರು ಹರಿದುಬರಬೇಕಾಗಿದೆ. ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಇದರಿಂದ ಪ್ರಸ್ತುತ ವರ್ಷ ಡ್ಯಾಂ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಗಳು ಕಂಡುಬರುತ್ತಿವೆ.
ಕಳೆದ ವರ್ಷ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಕೊರತೆಯಿಂದ ಭೀಕರ ಬರಗಾಲ ಸ್ಥಿತಿ ತಲೆದೋರಿತ್ತು. ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿತ್ತು. ಆದರೆ ಪ್ರಸ್ತುತ ವರ್ಷ ಉತ್ತಮ ಮುಂಗಾರು ಮಳೆಯಿಂದ ಮಲೆನಾಡಿನ ಕೆರೆಕಟ್ಟೆ, ಹಳ್ಳಕೊಳ್ಳ, ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.