ದಾವಣಗೆರೆ (Davanagere) : ರಾಷ್ಟ್ರೀಯ ಬಸವ ಪ್ರತಿಷ್ಠಾನವು ದಶಮಾನೋತ್ಸವದ ಅಂಗವಾಗಿ ಬಾಲಿ, ಮಲೇಷ್ಯಾ ಮತ್ತು ಥಾಯ್ಲೆಂಡ್‌ಗಳಲ್ಲಿ 11 ದಿನಗಳ ‘ಭಾರತ ವಚನ ಸಂಸ್ಕೃತಿ ಯಾತ್ರೆ’ ಆಯೋಜಿಸಿದೆ.
21ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಇಂಡೋ-ಬಾಲಿ ಸಾಂಸ್ಕೃತಿಕ ಸಮಾವೇಶ ನಡೆಯಲಿದೆ. ಬಾಲಿಯಲ್ಲಿ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಿಎಂ ಸದಾನಂದ ಗೌಡ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ವಿ. ಗೋಪಾಲಗೌಡ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಮತ್ತು ಸಾಹಿತಿ ಪ್ರೊ. ಸಿದ್ದು ಯಾಪಲಪರವಿ “ವಚನ ಸಾಹಿತ್ಯದ ಜಾಗತಿಕ ಮೌಲ್ಯಗಳು” ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾಣೇಹಳ್ಳಿಯ ಶಿವಸಂಚಾರದ ಪ್ರಮುಖ ಗಾಯಕರಾದ ನಾಗರಾಜ ಹೆಚ್ ಎಸ್ ಹಾಗೂ ಇತರರು ವಚನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಸಾಣೇಹಳ್ಳಿ ಕಲಾಸಂಘದ ಕಲಾವಿದರಿಂದ ‘ಉರಿಲಿಂಗ ಪೆದ್ದಿ’ ನಾಟಕ ಪ್ರದರ್ಶನ ಮೂಡಿಬರಲಿದೆ. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿಯ ಪ್ರೇಮಲೋಕ ಅಂತಾರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕ ಗುರೂಜಿ ಅವರಿಗೆ ಚೀಫ್ ಸಿವಲಿಯನ್ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಿ.ಎಸ್. ಬೋಪಯ್ಯ ತಿಳಿಸಿದ್ದಾರೆ.
ಭಾರತ ವಚನ ಸಂಸ್ಕೃತಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಉಜ್ಜಪ್ಪವಡೆಯರಹಳ್ಳಿಯ ಸುಗಮ ಸಂಗೀತ ಕಲಾವಿದ ಹಾಗೂ ಸಾಣೇಹಳ್ಳಿಯ ಶಿವಸಂಚಾರದ ಪ್ರಮುಖ ವಚನ ಗಾಯಕರಾದ ನಾಗರಾಜ ಹೆಚ್ ಎಸ್ ಅವರು ಸಂಗೀತ ಕಾರ್ಯಕ್ರಮಕ್ಕಾಗಿ ಇಂಡೋನೇಷ್ಯಾ, ಬಾಲಿ, ಥೈಲ್ಯಾಂಡ್ ನ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.
ವಚನ ಸಂಗೀತದ ಹಲವು ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿರುವ ಇವರು 2019 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.