ದಾವಣಗೆರೆ : ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲ ದರಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಗುರುವಾರ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ಬಿಜೆಪಿ ಕಚೇರಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರಿಗೆ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಹೆಸರಲ್ಲಿ ಓಟು ಪಡೆಯಲು ಬಡವರ, ಸಾಮಾನ್ಯರ ಮೇಲೆ ಹೊರೆಯ ಬರೆ ಎಳೆ ಎಳೆದಿದೆ. ಎಲ್ಲ ದರ ಹೆಚ್ಚಳ ಮಾಡಿ ಅಧಿಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಬಡವರ, ಜನ ಸಾಮಾನ್ಯರ ವಿರೋಧಿ ನಿಲುವನ್ನು ತಳೆದು ಅಧಿಕಾರ ನಡೆಸುತ್ತಿದೆ. ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದೆ. ಈ ಮೂಲಕ ರಾಜ್ಯವನ್ನ ಹತ್ತು ವರ್ಷ ಹಿಂದಕ್ಕೆ ತಳ್ಳಲಾಗಿದೆ ಎಂದು ಆರೋಪಿಸಿದರು.
ಓಟು ಪಡೆಯಲು ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ, ಬರೆಯನ್ನು ಎಳೆದಿದೆ. 1 ಲಕ್ಷ 5 ಸಾವಿರ ಕೋಟಿ ರೂ. ಸಾಲದ ಹೊರೆಯನ್ನು ರಾಜ್ಯದ ಜನತೆ ಮೇಲೆ ಹೊರಿಸಿದ್ದಾರೆ. ಮೊದಲು ಮೋಟರ್ ಟ್ಯಾಕ್ಸ್, ಮದ್ಯದ ದರ ಹೆಚ್ಚು ಮಾಡಿ, ಸ್ಟ್ಯಾಂಪ್ ತೆರಿಗೆ ಹೆಚ್ಚಳ ಮಾಡಿದ್ದರು. ಈಗ ಪೆಟ್ರೋಲ್ ಡಿಸೇಲ್ ದರ ಹೆಚ್ಚು ಮಾಡಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ರಾಜ್ಯವನ್ನು ಅಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದ್ದು, ಅಭಿವೃದ್ದಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರಕ್ಕೆ ಕರ್ನಾಟಕದ ಶಾಪ ಹಾಕುತ್ತಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆ ಆಗಿದ್ದರಿಂದ ಬಡ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ರಿಯಲ್ ಎಸ್ಟೇಟ್ ಮಾಪಿಯಾಕ್ಕೆ ರಾಜ್ಯ ಸರ್ಕಾರದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಡೀಲ್ ಕೊಟ್ಟಿದ್ದಾರೆ. ಕರ್ನಾಟಕ ಆಳುವ ನೈತಿಕತೆಯನ್ನು ಕಳೆದುಕೊಂಡಿದ್ದು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೂ ರಾಜ್ಯ ಸರ್ಕಾರದ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಕೊವಿಡ್ ನಂತರ ನಾನು ಮುಖ್ಯಮಂತ್ರಿ ಆಗಿದ್ದಾಗ ಪೆಟ್ರೋಲ್ ಸೆಸ್ ಕಡಿಮೆ ಮಾಡಿದ್ದೆ. ಬೇರೆ ರಾಜ್ಯದ ಪೆಟ್ರೋಲ್ ಬೆಲೆಯನ್ನು ತೋರಿಸಿ ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ನಮ್ಮ ರಾಜ್ಯದ ಹಣದುಬ್ಬರ ರಾಷ್ಟ್ರದ ಹಣದುಬ್ಬರಕ್ಕಿಂತ ಹೆಚ್ಚಿದೆ. ಆಯಿಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಬೆಲೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎನ್ ರಾಜಶೇಖರ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಯಶವಂತರಾವ್ ಜಾಧವ್, ಎಸ್.ಟಿ.ವೀರೇಶ್, ಬಸವರಾಜ ಗುಬ್ಬಿ, ಧನಂಜಯ, ಜಗದೀಶ್, ಬಿ.ಜಿ.ಅಜಯಕುಮಾರ್, ಬಿ.ಎಂ.ಸತೀಶ್ ಸೇರಿದಂತೆ ಇತರರು ಇದ್ದರು.