ಹರಿಹರ:
ಕೃತಕವಾಗಿ ಉತ್ಪತ್ತಿ ಮಾಡಲಾಗದ ರಕ್ತದ ಲಭ್ಯತೆಗಾಗಿ ರಕ್ತದಾನ ಹವ್ಯಾಸವಾಗಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಇಲ್ಲಿನ ಸೇಂಟ್ ಮೇರೀಸ್ ಕಾನ್ವೆಂಟ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಶೀಲಾ ಕುಮಾರಿ ಹೇಳಿದರು.
ನಗರದ ಸೇಂಟ್ ಮೇರೀಸ್ ಕಾನ್ವೆಂಟ್ ಶಾಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತ್ ಸ್ಕ್ವೌಟ್ಸ್ ಅಂಡ್ ಗೈಡ್ಸ್, ಆರ್.ಫಿಟ್ನೆಸ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಜ್ಯೋತಿ ಮಾತನಾಡಿ, ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ತುರ್ತು ಆರೋಗ್ಯ ಸ್ಥಿತಿಗಳಲ್ಲಿ ರಕ್ತದ ಅಗತ್ಯ ಸೃಷ್ಟಿಯಾಗುತ್ತದೆ. ಅಮೂಲ್ಯವಾದ ರಕ್ತದಾನ ಉತ್ತೇಜಿಸುವ ಕೆಲಸವನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದೆ ಎಂದರು.
ಶಾಲೆ ವ್ಯವಸ್ಥಾಪಕಿ ಸಿಸ್ಟರ್ ಮಾರ್ಟಿನಲ್ ಮಾತನಾಡಿ, ರಕ್ತದಾನ ಮಾನವೀಯತೆಯ ಪ್ರತೀಕವಾಗಿದೆ. ರಕ್ತದಾನ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲೆ ಜಾಗೃತಿಯನ್ನು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ 30 ಘಟಕ ರಕ್ತ ಸಂಗ್ರಹಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಸಿದ್ದಣ್ಣ ಡಿ.ಎಸ್., ನಿರ್ದೇಶಕ ರವಿಕುಮಾರ್ ಎ.ಜೆ., ವೈದ್ಯಾಧಿಕಾರಿಗಳಾದ ಡಾ. ಪಿ.ಕೆ.ಬಸವರಾಜ್, ಡಾ.ಕಾವ್ಯ, ಸಂಚಾಲಕ ಶಿವಕುಮಾರ ಎನ್.ಜಿ., ಆರ್.ಫಿಟ್ನೆಸ್ ಮಾಲಿಕ ರಾಹುಲ್ ಮೆಹರ್ವಾಡೆ, ದಾವಣಗೆರೆ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತೆ ಶಾರದಾ ಮಾಗನಹಳ್ಳಿ, ಜಿಲ್ಲಾ ಸಂಘಟಕಿ ಅಶ್ವಿನಿ ಜೆ., ಹರಿಹರ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಾಧ್ಯಕ್ಷ ಕೆ.ಬಿ.ರಾಜಶೇಖರ್, ಕಾರ್ಯದರ್ಶಿ ಪ್ರಭಾಕರ್ ಎಸ್., ಶಿಕ್ಷಕರಾದ ಜ್ಞಾನ ಪ್ರಕಾಶ್, ಜಾನ್ ಸ್ಟಿಫನ್, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್., ಗಿರೀಶ್ ಕೆ., ಜ್ಯೋತಿ ಕೆ. ಗುಡ್ಡದ್, ಸಿಬ್ಬಂದಿಗಳಾದ ಪದ್ಮಬಾಯಿ, ಪ್ರಿಯಾಂಕ, ರಮ್ಯ, ಹಾಗೂ ಇತರರಿದ್ದರು.