ದಾವಣಗೆರೆ : ಸಂವಿಧಾನದ ಪೂರ್ವ ಪೀಠಿಕೆಯನ್ನು ಯಥಾವತ್ತಾಗಿ ಜಾರಿ ಮಾಡುವುದೇ ಬಹುಜನ ಸಮಾಜ ಪಕ್ಷದ ಗ್ಯಾರಂಟಿ ಯೋಜನೆಯಾಗಿದ್ದು, ಮತದಾರರು ನಮ್ಮ ಪಕ್ಷದ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಿ. ಹನುಮಂತಪ್ಪ ಅವರಿಗೆ ಮತ ನೀಡುವಂತೆ ಪಕ್ಷದ ಮುಖಂಡ ಎಂ.ಸಿ. ಮೋಹನ್ ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬರ ತತ್ವ ಸಿದ್ಧಾಂತದ ಮೇಲೆ ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಲೆಂದೇ ಕಾನ್ಸಿರಾಂ ಜೀ ಅವರು ಬಹುಜನ ಸಮಾಜ ಪಕ್ಷವನ್ನು ಕಟ್ಟಿದರು. ಈಗ ನಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಯಥಾವತ್ತಾಗಿ ಜಾರಿ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಹಿಂದೆಯೂ ಇಂಥ ಗ್ಯಾರಂಟಿಯನ್ನು ನೀಡಲಿಲ್ಲ. ಮುಂದೆಯೂ ನೀಡುವುದಿಲ್ಲ. ಆದರೆ, ನಮ್ಮ ಪಕ್ಷದ ಉದ್ದೇಶ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆನ್ನುವುದು ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುವುದಾಗಿದೆ ಎಂದರು.
ಆದ್ದರಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರು ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಿ. ಹನುಮಂತಪ್ಪ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಕೋರಿದರು.
ಪಕ್ಷದ ಅಭ್ಯರ್ಥಿ ಡಿ. ಹನುಮಂತಪ್ಪ, ಕುಬೇರಪ್ಪ, ಕೃಷ್ಣಪ್ಪ ಕುಂಕುವ, ಎಸ್.ಸಂತೋಷ್, ಜೆ.ಡಿ. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.