ದಾವಣಗೆರೆ (Davanagere): ಸರಗಳ್ಳತನ ಮಾಡಿ 48 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿ 2.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೈಕ್ ವಶಪಡಿಸಿಕೊಂಡಿದ್ದಾರೆ.
ರಾಮನಗರದ ಆಟೋ ಚಾಲಕ ರವಿಕಿರಣ (27) ಬಂಧಿತ ಆರೋಪಿ.
ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಸುಮಂಗಳಮ್ಮ ಎಂಬುವರು ಮಾ.12ರಂದು ಬೆಳಗ್ಗೆ 6.30 ಗಂಟೆ ಸುಮಾರಿನಲ್ಲಿ ಕಳವೂರು ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್, ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಮಾರ್ಗದರ್ಶನದಲ್ಲಿ ಮಾಯಕೊಂಡ ಠಾಣೆ ಸಿಪಿಐ ಡಿ.ನಾಗರಾಜ, ಪಿಎಸ್‌ಐ ಎಸ್.ಬಿ.ಅಜಯ, ಹದಡಿ ಠಾಣೆಯ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ತನಿಖೆ ಕೈಗೊಂಡ ತಂಡ, ಮಾ.15ರಂದು ರವಿಕಿರಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 50 ಗ್ರಾಂ ತೂಕದ 2 ಲಕ್ಷ ರೂ. ಮೊತ್ತದ ಚಿನ್ನದ ಸರ, 80 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Channagiri | ಬಟ್ಟೆ ತೊಳೆಯಲು ಹೋದ ಮೂವರು ಮಹಿಳೆಯರು ನೀರು ಪಾಲು
ಪ್ರಕರಣದಲ್ಲಿ ಭಾಗಿಯಾಗಿದ್ದ ರಮೇಶ (47), ಮನು (23) ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ತಂಡದಲ್ಲಿ ಸಿಬ್ಬಂದಿ ಕರಿಬಸಪ್ಪ ಎಎಸ್‌ಐ, ಲೋಕ್ಯನಾಯ್ಕ, ಅಣ್ಣಯ್ಯ, ಮಾರುತಿ, ರಾಮಕೃಷ್ಣ, ಶ್ರೀನಿವಾಸ, ತಿಮ್ಮೇಶ್, ರಾಜು ಲಮಾಣಿ, ಚಾಲಕ ದಾದಪೀರ್, ಎಸ್ಪಿ ಕಚೇರಿ ಸಿಬ್ಬಂದಿ ರಾಮಚಂದ್ರ ಜಾಧವ್, ಅರುಣ್ ಇದ್ದರು. ಪ್ರಕರಣ ಬೇಧಿಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ.