ದಾವಣಗೆರೆ (Davanagere): ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದ ತಕ್ಷಣ ಸಮುದಾಯದ ಸಭೆ ನಡೆಸಿದರು. ಆದರೆ, ನಮ್ಮ ಸಮಾಜದ ಸಚಿವರು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಗಣತಿ ವಿರುದ್ಧ ದನಿ ಎತ್ತದ ಇಂತಹವರು ಈ ಕೂಡಲೇ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಷ್ಟವಾಗುವುದು ಇದೇ ಕಾರಣಕ್ಕೆ. ಸಮಾಜಕ್ಕೆ ಅನ್ಯಾಯವಾಗುತ್ತದೆ ಎನ್ನುವ ತಕ್ಷಣವೇ ಸಭೆ ಕರೆದರು. ಆದರೆ, ನಮ್ಮ ಲಿಂಗಾಯತ ಸಮಾಜದ ಏಳು ಜನ ಸಚಿವರಿದ್ದರೂ ಒಬ್ಬರೂ ಈವರೆಗೆ ದನಿ ಎತ್ತಿಲ್ಲ. ನಾನು ಈ ಬಗ್ಗೆ ಚರ್ಚೆ ಮಾಡಲು ಪೋನ್ ಮಾಡಿದರೆ ಸಚಿವರು ಫೋನ್ ರಿಸೀವ್ ಮಾಡೋಲ್ಲ. ಏಳು ಜನ ಸಚಿವರೂ ಅಸಮರ್ಥರು ಎಂದರು.
ಈ ಕುರಿತು ಸಚಿವ ಈಶ್ವರ ಖಂಡ್ರೆ ಅವರಿಗೆ ಕಾಲ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಲಿಂಗಾಯತ ಸಮುದಾಯದ ಯಾವೊಬ್ಬ ಸಚಿವರು ಜಾತಿಗಣತಿ ವರದಿ ಕುರಿತು ಚರ್ಚೆ ಮಾಡುತ್ತಿಲ್ಲ ಎಂದು ಸ್ವಪಕ್ಷದ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಜಾತಿ ಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆ. ಅವರೆಲ್ಲ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮತ್ತೆ ಜಾತಿಗಣತಿ ಸಮೀಕ್ಷೆ ಪ್ರಾರಂಭ ಮಾಡಬೇಕು. ನಾನು ಕೂಡ ನಮ್ಮ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೆರಡು, ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ಒಕ್ಕಲಿಗರು, ಲಿಂಗಾಯತರು ಅಷ್ಟೇ ಅಲ್ಲ, ಅನ್ಯಾಯಕ್ಕೆ ಒಳಗಾದ ಎಲ್ಲ ಸಮಾಜಗಳು ಸೇರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Read also : ಜಿಲ್ಲೆಗೆ ಉಪಲೋಕಾಯುಕ್ತರ ಭೇಟಿ: ಸಾರ್ವಜನಿಕರಿಂದ ನೇರ ದೂರು ಅರ್ಜಿ ಸ್ವೀಕಾರ
ಮೊದಲು ಜಾತಿ ಗಣತಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಿ. ಆದರೆ, ಜಾತಿ ಗಣತಿ ವರದಿ ಅನುಷ್ಠಾನ ಮಾಡುವುದು ಬೇಡ. ಎಲ್ಲರ ಸಮೀಕ್ಷೆ ಮುಗಿದ ನಂತರ ಅನುಷ್ಠಾನ ಮಾಡಲಿ. ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಕೊಡುವವರು ನಾವು. ಎಲ್ಲ ಸಮುದಾಯಕ್ಕೆ ಉತ್ತರ ಕೊಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.