ದಾವಣಗೆರೆ.ಅ.24 (Davanagere): ಶ್ರೀಗಂಧದ ಮರಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ 3 ಲಕ್ಷಕ್ಕೂ ಅಧಿಕ ಮೌಲ್ಯದ ಗಂಧದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಕೆರೆಬಿಳಚಿ ಕ್ಯಾಂಪಿನ ಸಲ್ಮಾನ್ ಖಾನ್ (25) ಬಂಧಿತ ಆರೋಪಿ. ಚನ್ನಗಿರಿ ಉಪವಿಭಾಗದ ಠಾಣಾ ಸರಹದ್ದುಗಳಲ್ಲಿ ಗಂಧದ ಮರಗಳ ಕಳವು ಪ್ರಕರಣಗಳ ಕುರಿತು ದಾಖಲಾಗಿದ್ದ ದೂರುಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ್ ಹಾಗೂ ಚನ್ನಗಿರಿ ಉಪವಿಭಾಗದ ಪ್ರಭಾರ ಉಪಾಧೀಕ್ಷಕಿ ಶ್ರೀಮತಿ ಪದ್ಮಶ್ರೀ ಗುಂಜಿಕರ್ ಮತ್ತು ಸಿಪಿಐ ಲಿಂಗನಗೌಡ ನೆಗಳೂರು ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ಮತ್ತು ಪಿಎಸ್‌ಐ ಚನ್ನವೀರಪ್ಪ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಳನೀರು ಕೀಳುವ ಕೂಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಖಾನ್‌ನನ್ನು ಬಂಧಿಸಿ ಆತನಿಂದ ಸುಮಾರು 3,15,000/- ರೂಪಾಯಿ ಬೆಲೆ ಬಾಳುವ 45 ಕೆಜಿ ಶ್ರೀಗಂಧದ ಮರದ ತುಂಡುಗಳು ಮತ್ತು ಚಕ್ಕೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಗರಗಸವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಇದರೊಂದಿಗೆ ಸಂತೇಬೆನ್ನೂರು ಪೊಲೀಸ್ ಠಾಣಾ ಸರಹದ್ದಿನ ಕಾಶೀಪುರ ಕ್ಯಾಂಪಿನ ಅಡಿಕೆ ತೋಟದಲ್ಲಿದ್ದ ಶ್ರೀಗಂಧದ ಮರ ಕಳುವಾದ ಪ್ರಕರಣ, ಚನ್ನಗಿರಿ ಪೊಲೀಸ್ ಠಾಣಾ ಸರಹದ್ದಿನ ಚನ್ನಗಿರಿ ಟೌನ್ ಕೋರ್ಟ್ ಮುಂಭಾಗದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳುವಾದ ಪ್ರಕರಣ ಸೇರಿದಂತೆ ಒಟ್ಟು 02 ಶ್ರೀಗಂಧದ ಮರ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ವೀರಭದ್ರಪ್ಪ, ರುದ್ರೇಶ್, ಸತೀಶ್, ರಾಘವೇಂದ್ರ, ಸಂತೋಷ್, ನಾಗರಾಜ, ಜಗದೀಶ್, ರೇವಣಸಿದ್ದಪ್ಪ, ಸಂತೋಷ್ ಪಾಟೀಲ್ ಭಾಗವಹಿಸಿದ್ದರು.