Kannada News | Dinamaana.com | 28-05-2024
ದಾವಣಗೆರೆ.ಮೇ.೨೮: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರಜ್ವಲ್ ರೇವಣ್ಣನ ಬಂಧನ ಮತ್ತು ಹೆಣ್ಣುಮಕ್ಕಳ ಘನತೆಯ ರಕ್ಷಣೆಗೆ ಆಗ್ರಹಿಸಿ ಇದೇ ಮೇ.30ರಂದು ನಮ್ಮೆಲ್ಲರ ನಡಿಗೆ ಹಾಸನದ ಕಡೆಗೆ ‘ಹಾಸನ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ನ ಕೆ.ಎಚ್.ಆನಂದರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.೨೯ರ ರಾತ್ರಿ ದಾವಣಗೆರೆಯಿಂದ ಹಾಸನಕ್ಕೆ ಹೋಗಿ ಮೇ.೩೦ ರಂದು ಬೆಳಿಗ್ಗೆ ೧೦.೩೦ ಕ್ಕೆ ಅಲ್ಲಿನ ಮಹಾರಾಜ ಪಾಕ್೯ ನಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಸುಮಾರು ೧೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಯಾವುದೇ ರಾಜಿಗೆ ಅವಕಾಶ ಇಲ್ಲದಂತೆ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ, ಕ್ರಮ, ವಿಚಾರಣೆಯನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಮುನ್ನಡೆಸಬೇಕು. ಎಲ್ಲಿದ್ದರೂ ಬಿಡದೆ ಆ ನೀಚನನ್ನು ಕೇಂದ್ರ ಸರ್ಕಾರ ಹಿಡಿದು ತರಬೇಕು, ಬದುಕು ಛಿದ್ರಗೊಂಡಿರುವ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮಹಿಳಾ ಆಯೋಗ ಮತ್ತು ಸರ್ಕಾರ ವಿಶ್ವಾಸಪೂರ್ಣ ಹೆಜ್ಜೆಗಳನ್ನು ಇಡಬೇಕು ಎಂದು ಒತ್ತಾಯಿಸಿದರು.
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರವು ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಿ, ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಬದುಕು ಮತ್ತು ಘನತೆ ಕಾಪಾಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಸಮಾಜವು ಮೌನ ಮುರಿದು ಲಿಂಗ ಸಮಾನತೆಗಾಗಿ ದನಿ ಎತ್ತಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಧು ತೊಗಲೇರಿ,ಮಮತ, ಪವಿತ್ರ, ಸತೀಶ ಅರವಿಂದ ಇದ್ದರು.