ದಾವಣಗೆರೆ (Davanagere) : ಜನರಿಂದ, ಜನರಿಗಾಗಿ, ಜನರಿಗೋಸ್ಕರ ಪ್ರಜಾಪ್ರಭುತ್ವ, ಆದರೆ, ವಾಸ್ತವದಲ್ಲಿ ಜನರು ಮೂಕರಾಗಿ, ಜನಪ್ರತಿನಿಧಿಗಳು ಕಿವುಡರಾಗಿರುವಂತಿದೆ ಈ ಪ್ರಜಾಪ್ರಭತ್ವ ವ್ಯವಸ್ಥೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿ ನಾರಾಯಣ್ ಅಸಮಾಧಾನ ವ್ಯಕ್ತಿಪಡಿಸಿದರು.
ಸಿವಿಕ್ ಬೆಂಗಳೂರು ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಹಭಾಗಿತ್ವದಲ್ಲಿ ನಗರದ ರೋಟರಿ ಬಾಲಭವನದಲ್ಲಿ 74ನೇ ತಿದ್ದುಪಡಿ (ನಗರಪಾಲಿಕೆ ಕಾಯಿದೆ) ಕುರಿತು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ನಗರ ಪಾಲಿಕೆ ಈ ಕಾಯಿದೆಗೆ ತಿದ್ದುಪಡಿ ಬಂದು 30 ವರ್ಷ ಕಳೆದಿದ್ದರೂ, ಅದರ ಅನುಷ್ಠಾನವಾಗಿಲ್ಲವೆಂದರೆ, ನಮ್ಮ ಆಡಳಿತಾತ್ಮಕ ವ್ಯವಸ್ಥೆ ಹೇಗಿದೆ ಎಂಬುದು ತಿಳಿಯುತ್ತದೆ. ಎಲ್ಲವನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಎತ್ತಾಕಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇದೊಂದೇ ವಿಷಯವಲ್ಲ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಚಾರ, ಶೋಷಣೆ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ಜನರು ಜಾಗೃತಿರಾಗಿ ಪ್ರಶ್ನಿಸಬೇಕು. ಸಮಾಜದಲ್ಲಿ ಹೊರೆ ಹೊರುವವರು (ಶ್ರಮಿಕರು) ಅದರ ಫಲ ಉಣ್ಣುವವರು ಉಳ್ಳವರಾಗಿದ್ದಾರೆ. ನಾವು ಜಾಗೃತಿರಾಗಿ ನಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಗಾರ ಯಶಸ್ವಿಯಾಗಲಿ ಎಂದು ಆಶಿಸಿದರು.
ಸಿವಿಕ್ ಸಂಸ್ಥೆ ಬೆಂಗಳೂರಿನ ರಾಜರಾಜೇಶ್ವರಿ ಮಾತನಾಡಿ, ಪ್ರತಿ ವಾರ್ಡ್ ಸಮಿತಿಯಲ್ಲಿ 10 ಸದಸ್ಯರು ಇರಬೇಕು. ಅದರಲ್ಲಿ 9 ಮಂದಿ ನಾಗರೀಕರು, ಒಬ್ಬರು ಆ ಭಾಗದ ಪಾಲಿಕೆ ಸದಸ್ಯರು. ಆ ಸಮಿತಿಯಲ್ಲಿ ಇಡೀ ವಾರ್ಡಿನೊಳಗಿನ ಸಮಸ್ಯೆಗಳನ್ನು ಚರ್ಚಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಆದರೆ, ನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದು 30 ವರ್ಷ ಕಳೆದರೂ ರಾಜ್ಯದ 10 ಮಹಾನಗರ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳು ರಚನೆಯಾಗಿಲ್ಲ. ಇದು ನಗರಾಡಳಿತದ ದೌರ್ಬಲ್ಯಯವನ್ನು ಎತ್ತಿತೋರಿಸುತ್ತದೆ. ಇಂತಹ ಕಾರ್ಯಗಾರದಿಂದ ಎಚ್ಚತ್ತುಕೊಂಡು ಮುಂದಿನ ದಿನಗಳಲ್ಲಾದರೂ ವಾರ್ಡ್ ಸಮಿತಿ ರಚನೆಯಾಗಬೇಕು ಎಂದರು.
Read also : Davanagere | ಭೂಮಾತಾ ರೈತ ಉತ್ಪಾದಕ ಕಂಪನಿಯ ರೈತಕಾಳಜಿ ಶ್ಲಾಘನೀಯ: ಶ್ರೀಧರ ಮೂರ್ತಿ
ದಾವಣಗೆರೆ ಮಹಾನಗರ ಪಾಲಿಕೆ ಸಹಾಯಕ ಆಯುಕ್ತೆ ಲಕ್ಷ್ಮೀ ದೇವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ, ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂರಕ್ಕೂ ಹೆಚ್ಚು ಬೀಡಿ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು.
ಬಾಕ್ಸ್…
ನ್ಯಾಯಾಂಗವೂ ಸೇರಿದಂತೆ ಕಾರ್ಯಾಂಗ , ಶಾಸಕಾಂಗ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳು ಭ್ರಷ್ಟಚಾರದಿಂದ ತುಂಬಿವೆ. ಪ್ರಜಾಪ್ರಭತ್ವದಲ್ಲಿ ಜನರು ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸ್ಥಳಿಯ ನಗರಾಡಳಿತ ವಾರ್ಡ್ ಸಮಿತಿಯನ್ನು ರಚಿಸಿ ಅವು ಕಾರ್ಯನಿರ್ವಹಿಸುವಂತೆ ಮಾಡಬೇಕು. ಜನರು ವಾರ್ಡ್ ಸಮಿತಿಯಲ್ಲಿ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸುವಂತಾಗಬೇಕು. ಜನರು ಬುದ್ದಿವಂತರಾದರೆ ತಮ್ಮ ಭ್ರಷ್ಟಚಾರಕ್ಕೆ ಕಡಿವಾಣ ಬೀಳುತ್ತದೆ ಎಂದು ರಾಜಕಾರಣಿಗಳು ಜನರ ಜಾಗೃತಿಯಾಗುವುದನ್ನು ಬಯಸುವುದಿಲ್ಲ. ಜನರಿಗೆ ಸಂವಿಧಾನ ನೀಡಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅರ್ಥಮಾಡಿಕೊಂಡು ನಿರಂತರ ಹೋರಟ ನಡೆಸಬೇಕು.
ಬಾಕ್ಸ್…
ಚಿಕ್ಕವನಿರುವಾಗ ನನ್ನಮ್ಮನೊಂದಿಗೆ ನಾನು ಬೀಡಿ ಕಟ್ಟಿದ್ದೇನೆ. ನಾನು ಒರ್ವ ಬೀಡಿ ಕಾರ್ಮಿಕಳ ಮಗ. ಬೀಡಿ ಉದ್ಯಮ ಮತ್ತು ಬೀಡಿ ಕಟ್ಟುವವರ ಕಷ್ಟಗಳೇನು ಎಂಬುದು ನನಗೆ ತಿಳಿದಿದೆ. ನಾನು ಮೇಯರ್ ಆಗಿರುವ ಈ ಅಲ್ಪಾವಧಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ. 3ಸಾವಿರಕ್ಕಿಂತ ಹೆಚ್ಚು ಬೀಡಿ ಕಾರ್ಮಿಕರು ದಾವಣಗೆರೆ ದಕ್ಷಿಣದಲ್ಲಿದ್ದು ಅವರಿಗಾಗಿ ಇಎಸ್ಐ ಆಸ್ಪತ್ರೆ ಘಟಕ ಸ್ಥಾಪಿಸುವಂತೆ ಸಂಸದರ ಗಮನಕ್ಕೆ ತಂದು ಹೋರಾಟ ಮಾಡೋಣ, ನೀವು ನನ್ನೊಂದಿಗೆ ಕೈಜೋಡಿಸಿ.
ಕೆ.ಚಮನ್ಸಾಬ್ ಮಹಾಪೌರರು ದಾವಣಗೆರೆ ಮಹಾನಗರ ಪಾಲಿಕೆ.