ದಾವಣಗೆರೆ.ಸೆ.24 (Davanagere) ; ದಾವಣಗೆರೆ ನಗರ ರಾಜ್ಯದಲ್ಲಿಯೇ ಮಾದರಿ, ಅಭಿವೃದ್ದಿ ಹೊಂದಿದ ನಗರವನ್ನಾಗಿಸಲು ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಒಗ್ಗಟ್ಟಾಗಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸೋಣ. ಮುಂದಿನ ದಿನಗಳಲ್ಲಿ ಶಾಂತಯುತ ಮೆರವಣಿಗೆ ಮಾಡಲು ಜಿಲ್ಲಾಡಳಿತದಿಂದ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ದಾವಣಗೆರೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರಿಕ ಸೌಹಾರ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣೇಶ ಮೆರವಣಿಗೆ ಹಾಗೂ ಇತರೆ ಸಮುದಾಯದವರು ನಡೆಸುವ ಮೆರವಣಿಗೆಯಲ್ಲಿ ನಡೆಯುವ ಸಣ್ಣ ಘಟನೆಗಳು ಸಮಾಜಕ್ಕೆ ಬಹಳ ನಷ್ಟ ಉಂಟು ಮಾಡುತ್ತವೆ, ಈ ಹಿಂದೆ 1991-92 ರಲ್ಲಿ ನಡೆದ ಸಣ್ಣ ಘಟನೆಯಿಂದ ಜನರು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಯಿತು. ಮೊನ್ನೆ ಅರಳಿಮರದ ವೃತ್ತದಲ್ಲಿ ನಡೆದ ಘಟನೆಯು ಅಷ್ಟೆ ಪ್ರಚೋದನಕಾರಿ ಪೋಸ್ಟ್‌ನಿಂದಾಗಿ ಘಟನೆ ನಡೆದ ತಕ್ಷಣ ಪೊಲೀಸ್ ಇಲಾಖೆ ಸೂಕ್ತವಾದ ಕ್ರಮ ಕೈಗೊಂಡು ನಿಯಂತ್ರಿಸಿದೆ. ಈ ರೀತಿ ಮುಂದೆ ಯಾವುದೇ ಘಟನೆಗಳು ನಡೆಯಬಾರದು ಎಂದರು.
ಜಿಲ್ಲೆಯಲ್ಲಿ ಎಲ್ಲಾ ಕಡೆ ಶಾಂತಯುತವಾದ ವಾತಾವರಣವಿದ್ದು ಈಗಾಗಲೇ ಮಲೆಬೆನ್ನೂರು, ಚನ್ನಗಿರಿ ಗಣೇಶನ ಉತ್ಸವಗಳು ಬಹಳ ಸೌಹಾರ್ದಯುತವಾಗಿ ಮುಗಿದಿವೆ. ನಗರದಲ್ಲಿ ಇನ್ನೂ ಅನೇಕ ಗಣೇಶನ ಮೆರವಣಿಗೆಗಳಿವೆ ಹಾಗೂ ವಿಜಯದಶಮಿ ಹಬ್ಬವು ಇರುವುದರಿಂದ ಎಲ್ಲರೂ ಸೌಹಾರ್ಧೆಯಿಂದರಬೇಕು ಬಾವುಟ ಕಟ್ಟಲು ಕೆಲವು ಸಂದರ್ಭದಲ್ಲಿ ಗಲಾಟೆಗಳಾಗಿವೆ, ಈ ಬಗ್ಗೆ ಮಂದಿನ ದಿನಗಳಲ್ಲಿ ನಿಯಮಗಳನ್ನು ರೂಪಿಸಲಾಗುತ್ತದೆ. ಯುವಕರು ಸಾಕಷ್ಟು ಯೋಚನೆ ಮಾಡಬೇಕು. ಯುವಕರು ಗಲಾಟೆಗಳಲ್ಲಿ ಭಾಗಿಯಾಗಬಾರದು, ಎಲ್ಲರೂ ಶಾಂತಿ, ಸೌಹಾರ್ದತೆ ಮರೆಯಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಪೊಲೀಸ್ ಇಲಾಖೆಯು ನಿರ್ಧಾಕ್ಷೀಣ್ಯ ಕ್ರಮ ಜರುಗಿಸಲಿದೆ. ಅವರ ಕಾರ್ಯದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
Read also : Davanagere | ಕಾಂಗ್ರೆಸ್ ವಿರುದ್ದ ಬಿಜೆಪಿಗರಿಂದ ನಿರಂತರ ಷಡ್ಯಂತರ : ವಿನಯಕುಮಾರ್ ಸೊರಕೆ
ಸಿಸಿ.ಟಿ.ವಿ ಸರ್ವಲೆನ್ಸ್ ಹೆಚ್ಚಳ; ನಗರದಲ್ಲಿ ಈಗಾಗಲೇ 500 ಕ್ಕಿಂತಲೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಸರ್ವೆಲೆನ್ಸ್ ಮಾಡುತ್ತಿದ್ದು ನಗರಕ್ಕೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಮತ್ತು ವೃತ್ತ, ಸಂಪರ್ಕ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಸಿಟಿವಿ ಹೆಚ್ಚಳ ಮಾಡುವ ಮೂಲಕ ಕಿಡಿಗೇಡಿಗಳ ಪತ್ತೆಗೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಯಾವುದೇ ಕಿಡಿಗೇಡಿಗಳು ಸರಗಳ್ಳತನ, ಬೆದರಿಕೆ ಒಡ್ಡುವುದು ಸೇರಿದಂತೆ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದಲ್ಲಿ ತಕ್ಷಣವೇ ಅವರನ್ನು ಪತ್ತೆಹಚ್ಚಲು ಎಲ್ಲಾ ಕಡೆ ತಾಂತ್ರಿಕ ಕಾವಲು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ವ್ಯಾಪಾರೋದ್ಯಮಕ್ಕೆ ಬೆಂಬಲ; 1991 ರಲ್ಲಿ ನಡೆದ ಘಟನೆಯಿಂದ ದಾವಣಗೆರೆಯಲ್ಲಿನ ವ್ಯಾಪಾರ ಕುಂಟಿತವಾಯಿತು. ಇದರಿಂದ ಚೇತರಿಸಿಕೊಳ್ಳಲು ಸಾಕಷ್ಟು ವರ್ಷಗಳೇ ಬೇಕಾಯಿತು. ಆದ್ದರಿಂದ ಬೃಹತ್ ಎಪಿಎಂಸಿ ಹೊಂದಿದ್ದು ವ್ಯಾಪಾರ ವಹಿವಾಟು ಹೆಚ್ಚಿಸಲು ಎಲ್ಲರೂ ಸೌಹಾರ್ದತೆಯಿಂದ ಇರಬೇಕು. ಯಾವುದೇ ಪಕ್ಷವಾಗಿರಲಿ ಸ್ನೇಹತ್ವದ ವಾತಾವರಣವಿರಬೇಕು ಮತ್ತು ಸ್ನೇಹದಿಂದಲೇ ಮನಗಳನ್ನು ಗೆಲ್ಲಬೇಕು. ಪ್ರಚೋದನಕಾರಿ ಹೇಳಿಕೆಗಳಿಗೆ ಯಾರು ಸಹ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು, ಇದಕ್ಕಾಗಿಯೇ ಪೊಲೀಸ್ ಇಲಾಖೆ ಇದ್ದು ಕಠಿಣ ಕ್ರಮ ಜರುಗಿಸಲಿದೆ ಎಂದು ತಿಳಿಸಿ ಮೆರವಣಿಗೆಗಳಲ್ಲಿ ಡಿಜೆ ಬದಲಾಗಿ ಜಾನಪದ ಮೇಳಗಳು, ಸ್ಥಳೀಯ ಕಲಾತಂಡಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವುದರಿಂದ ಯಾರಿಗೂ ಲಾಭವಿಲ್ಲ, ಕಾನೂನು ಸುವ್ಯಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಗಳಿದ್ದರೂ ನಿರ್ಧಾಕ್ಷೀಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಮೊನ್ನೆ ನಡೆದ ಘಟನೆಯಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. 6 ಪ್ರಕರಣ ದಾಖಲು ಮಾಡಿ 50 ಜನರನ್ನು ಅರೆಸ್ಟ್ ಮಾಡಲಾಗಿದೆ, ಇನ್ನೂ ಕೆಲವರಿದ್ದು ಅವರಿಗಾಗಿ ಶೋಧನೆ ನಡೆದಿದ್ದು ಕರೆ ತಂದು ಬಂಧಿಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 8 ಪ್ರಕರಣ ದಾಖಲಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕಟ್ಟಿಟ್ಟಬುತ್ತಿ, ಭಾಗಿಯಾಗದವರು ಯಾವುದೇ ಆತಂಕವಿಲ್ಲದೇ ಇರಬಹುದೆಂದರು.
.ಕೆಲವು ಯುವಕರು, ಕಿಡಿಗೇಡಿಗಳು ಈ ಘಟನೆಗೆ ಕಾರಣರಾಗಿದ್ದಾರೆ, ಯಾವುದೇ ಒತ್ತಡಗಳಿಗೆ ಮಣಿಯದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೃತ್ಯದಲ್ಲಿ ಭಾಗಿ ಮತ್ತು ಪ್ರಚೋದನೆ ನೀಡಿದವರನ್ನು ಮಾತ್ರ ಬಂಧಿಸಲಾಗಿದೆ ಎಂದ ಅವರು ಅಂದಿನ ಗಲಾಟೆಯನ್ನು 15 ನಿಮಿಷದಲ್ಲಿ ನಿಯಂತ್ರಣಕ್ಕೆ ತರಲಾಯಿತು. ಇಲ್ಲಿನ ನಾಗರಿಕರ ಸಹಕಾರ ಬಹಳ ದೊಡ್ಡದಿದ್ದು ಮುಂದಿನ ದಿನಗಳಲ್ಲಿಯು ನಾಗರಿಕರ ಸಹಕಾರ ಇಲಾಖೆಗೆ ಇದೇ ರೀತಿ ಇರಲೆಂದರು.
ಮುಖಂಡರಾದ ಡಿ.ಬಸವರಾಜ್, ಎಸ್.ಟಿ.ವೀರೇಶ್, ವೈ.ಮಲ್ಲೇಶ್, ನಜೀರ್ ಅಹಮದ್, ಸೋಮ್ಲಾಪುರ ಹನುಮಂತಪ್ಪ, ಸೈಯದ್ ಸೈಫುಲ್ಲಾ, ಅಮ್ಜದ್ ಖಾನ್, ಜಯಂತ್, ಟಿ.ಅಜ್ಗರ್ ಸೇರಿದಂತೆ ಅನೇಕ ಮುಖಂಡರು ಶಾಂತಿ, ಸೌಹಾರ್ದತೆ ಬಗ್ಗೆ ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.