ದಾವಣಗೆರೆ,ಜೂನ್.19 : ಹವಾಮಾನ ವೈಪರಿತ್ಯದಿಂದ ತಾಪಮಾನ ಹೆಚ್ಚಾಗುವ ಜೊತೆಗೆ ಬರಸ್ಥಿತಿಯನ್ನು ಎದುರಿಸುವಂತಾಗಲು ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಬುಧವಾರ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಸದಸ್ಯರು ಹಾಗೂ ರೈತ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಧಿಕಾರಿಗಳೊಂದಿಗೆ ನೆಲ, ಜಲ, ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾದ ಸಭೆಯಲ್ಲಿ ಇಲಾಖಾವಾರು ಜಲಸಂರಕ್ಷಣಾ, ಅರಣ್ಯೀಕರಣ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದರು.
ಕಳೆದ ವರ್ಷದ ಭೀಕರ ಬರಗಾಲದಿಂದ ಸಾಕಷ್ಟು ಪಾಠವನ್ನು ಕಲಿಯಲಾಗಿದ್ದು ಜಲ ಸಂರಕ್ಷಣೆ, ಅರಣ್ಯೀಕರಣಕ್ಕೆ ಮುಂದಾಗಬೇಕಾಗಿದೆ. ಎಲ್ಲೆಲ್ಲಿ ಜಲಸಂರಕ್ಷಣಾ ಕೆಲಸವಾಗಿದೆ, ಅಂತಹ ಪ್ರದೇಶದಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿರುವುದಿಲ್ಲ. ಮತ್ತು ಎಲ್ಲೆಲ್ಲಿ ಅರಣ್ಯೀಕರಣ ಹೆಚ್ಚಿದೆ ಅಂತಹ ಕಡೆಯು ತಾಪಮಾನ ನಿಯಂತ್ರಣವಾಗಿರುವುದನ್ನು ಕಾಣಲಾಗಿದೆ. ಈ ಹಿನ್ನಲೆಯಲ್ಲಿ ನೀರು, ನೆಲ, ಪರಿಸರ, ಹವಾಮಾನ ಸಂರಕ್ಷಣೆಗಾಗಿ ಎಲ್ಲಾ ಇಲಾಖೆಗಳು ಭವಿಷ್ಯದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕಾಗಿದೆ ಎಂದರು.
ಹೊಸ ಕೆರೆಗಳ ನಿರ್ಮಾಣ ಮತ್ತು ಮಳೆ ನೀರುಕೊಯ್ಲು
ಜಿಲ್ಲೆಯಲ್ಲಿ ಎಲ್ಲಾ ಕೆರೆಗಳು ಸೇರಿ 595 ಕೆರೆಗಳಿದ್ದು ಇನ್ನೂ ಹೊಸದಾಗಿ ಕೆರೆಗಳ ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ನೀರು ನಿಲ್ಲಿಸಿ, ಇಂಗಿಸುವ ಕೆಲಸ ಮಾಡಬೇಕಾಗಿದೆ. ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ 36 ಕೆರೆಗಳಿದ್ದು ಇವುಗಳಲ್ಲಿನ ಹೂಳನ್ನು ತೆಗೆಯುವ ಮೂಲಕ ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡುವ ಮೂಲಕ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದ್ದು ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತಿಳಿಸಿ ಗ್ರಾಮಗಳ ಸಮೀಪ, ಕಂದಾಯ ಭೂಮಿ ಅಂಚಿನಲ್ಲಿ ಅರಣ್ಯ ಇಲಾಖೆ ಕೆರೆಗಳಿದ್ದಲ್ಲಿ ಹೂಳೆತ್ತುವಾಗ ಅಲ್ಲಿನ ಮಣ್ಣನ್ನು ರೈತರ ಹೊಲ, ತೋಟಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಈಗಿರುವ ಕೆರೆಗಳ ಜೊತೆಗೆ ಹೊಸದಾಗಿ ಕೆರೆಗಳ ನಿರ್ಮಾಣ ಮಾಡಲು ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ, ನಗರಾಭಿವೃದ್ದಿ ಪ್ರಾಧಿಕಾರದಿಂದ ಯೋಜನೆ ತಯಾರಿಸಬೇಕು. 10 ಎಕರೆಗಿಂತ ಹೆಚ್ಚು ಭೂ ಪರಿವರ್ತನೆಯಾಗಿ ನಿವೇಶನಗಳನ್ನು ನಿರ್ಮಾಣ ಮಾಡುವ ಬಡಾವಣೆಗಳಲ್ಲಿ ಲಭ್ಯವಾಗುವ ಸಿಎ ಸೈಟ್‍ಗಳಲ್ಲಿ ಸಣ್ಣ ಸಣ್ಣ ಕೆರೆಗಳ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಜಲಾನಯನ ಅಭಿವೃದ್ದಿ; ಮಳೆಗಾಲದಲ್ಲಿ ಜಲಾನಯನ ಅಭಿವೃದ್ದಿ ಮಾಡಲು ನೀರನ್ನು ನಿಲ್ಲಿಸಿ, ಇಂಗಿಸಿ ಅಂತರ್ಜಲ ಹೆಚ್ಚಳ ಮಾಡಲು ಗೋಕಟ್ಟೆ, ಪಿಕಪ್, ನಿರ್ಮಾಣ ಮಾಡಬೇಕು ಮತ್ತು ಕೃಷಿ ಹೊಂಡಗಳ ನಿರ್ಮಾಣ, ಬದು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಕಳೆದ ವರ್ಷ 140 ಅಮೃತ ಸರೋವರ, 112 ಮಳೆನೀರು ಕೊಯ್ಲು, 476 ರೈತರ ಜಮೀನಿನಲ್ಲಿ ಬದು ನಿರ್ಮಾಣ, ಕೊಳವೆಬಾವಿ ಪುನಶ್ಚೇತನ, ಈ ವರ್ಷ 304 ಹೊಸದಾಗಿ ಕೊಳವೆಬಾವಿ ಪುನಶ್ಚೇತನ ಕಾಮಗಾರಿ, 350 ಕೃಷಿ ಹೊಂಡ, ಗ್ರಾಮಗಳಲ್ಲಿ ಉಪಯೋಗಿಸಿದ ನೀರು ಇಂಗಿಸಲು ಇಂಗುಗುಂಡಿಗಳ ನಿರ್ಮಾಣವನ್ನು ಖಾತರಿ ಮತ್ತು ಅಟಲ್ ಭೂ ಜಲ ಯೋಜನೆಯಡಿ 24 ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಳ್ಳಲಾಗಿದೆ. ಈ ವರ್ಷ ಇನ್ನೂ ಹೆಚ್ಚಿನ ಜಲಸಂರಕ್ಷಣಾ ಕಾಮಗಾರಿಗಳನ್ನು ನರೇಗಾದಡಿ ಕೈಗೊಳ್ಳಲಾಗುತ್ತದೆ ಎಂದರು.
ಮನೆಗಳಲ್ಲಿ ಮಳೆನೀರು ಕೊಯ್ಲು; ಹೊಸದಾಗಿ ಮನೆ ನಿರ್ಮಾಣ ಮಾಡುವಾಗ ಪರವಾನಗಿ ಪಡೆಯುವ ಸಂದರ್ಭದಲ್ಲಿ ಮಳೆನೀರು ಕೊಯ್ಲು ಮಾಡುವ ಷರತ್ತಿನೊಂದಿಗೆ ಅನುಮತಿ ನೀಡಲಿದ್ದು ಇದು ಕಡ್ಡಾಯವಾಗಿದ್ದರೂ ಅನೇಕರು ಅಳವಡಿಸಿಕೊಳ್ಳದಿರುವುದನ್ನು ಗಮನಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಇದನ್ನು ಅನುಷ್ಠಾನ ಮಾಡಲು ಮುಂದಾಗಬೇಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಯು ಪಂಚಾಯಿತಿಗಳಿಂದ ಮನೆ ಲೈಸೆನ್ಸ್ ನೀಡುವ ವೇಳೆ ಮಳೆನೀರು ಕೊಯ್ಲು ಅಳವಡಿಕೆ ಷರತ್ತಿನೊಂದಿಗೆ ಲೈಸೆನ್ಸ್ ನೀಡಲು ಮುಂದಾಗಲು ತಿಳಿಸಿದರು.
ಅರಣ್ಯಕ್ಕೆ ಒತ್ತು; ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿ ಹೆಚ್ಚು ಸಸಿಗಳನ್ನು ನೆಡಲು ಮುಂದಾಗಬೇಕು. ಸೆಪ್ಟೆಂಬರ್‍ವರೆಗೂ ಮಳೆಯಾಗಲಿದ್ದು ಜೂನ್, ಜುಲೈನಲ್ಲಿ ಸಸಿಗಳನ್ನು ನೆಟ್ಟಲ್ಲಿ ಬೇರುಬಿಟ್ಟು ಬೇಸಿಗೆ ಬರುವಷ್ಟರಲ್ಲಿ ಬೆಳೆವಣಿಗೆಯಾಗಲಿವೆ. ಸರ್ಕಾರಿ ಜಾಗ, ಕೈಗಾರಿಕೆ ಪ್ರದೇಶಗಳು, ಕಾಲುವೆಗಳಿಗೆ ಸ್ವಾಧೀನವಾಗಿರುವ ಜಮೀನಿನ ಅಂಚಿನಲ್ಲಿ, ಶಾಲಾ, ಕಾಲೇಜಿನ ಆವರಣ, ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಬೇಕು.
ಪ್ರವಾಸಿ ವನಾಭಿವೃದ್ದಿ; ವಿವಿಧ ಜಾತಿಗಳ ಗಿಡ, ಮರಗಳು, ವಿಶೇಷವಾದ ಗಿಡಗಳನ್ನು ಬೆಳೆಸುವ ಮೂಲಕ ಪ್ರವಾಸಿ ವನವನ್ನು ಅಭಿವೃದ್ದಿಪಡಿಸುವುದರಿಂದ ಮಕ್ಕಳಲ್ಲಿ ಮರಗಿಡಗಳ ಬಗ್ಗೆ ಆಸಕ್ತಿ ಮೂಡಿಸಬಹುದಾಗಿದೆ. ಶಾಲಾ, ಕಾಲೇಜುಗಳಿಂದ ಮಕ್ಕಳನ್ನು ಕರೆತಂದು ಜಾಗೃತಿ ಮೂಡಿಸಬಹುದಾಗಿದೆ. ಇದಕ್ಕಾಗಿ ಚಿನ್ನರ ವನಾಭಿವೃದ್ದಿಗೆ ಮುಂದಾಗಲು ತಿಳಿಸಿದರು.
ಅಂಗನವಾಡಿ, ಶಾಲಾ ಆವರಣದಲ್ಲಿ ಹಣ್ಣು, ತರಕಾರಿ; ಅಂಗನವಾಡಿ ಮತ್ತು ಶಾಲಾ ಆವರಣದಲ್ಲಿ ಹಣ್ಣು, ತರಕಾರಿ ಗಿಡಗಳನ್ನು ಬೆಳೆಸಬೇಕು.ಇಲ್ಲಿ ನುಗ್ಗೆ, ಹಲಸು, ತೆಂಗು, ಕರಿಬೇವು ಬೆಳೆಸುವುದರಿಂದ ಅಲ್ಲಿನ ಮಕ್ಕಳಿಗೆ ಬಿಸಿಯೂಟಕ್ಕೆ ಅನುಕೂಲವಾಗಲಿದೆ. ಜೊತೆಗೆ ಶಾಲಾ ಆವರಣದ ಪರಿಸರ ಚನ್ನಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸ್ಮಾರ್ಟ್‍ಸಿಟಿನಿಂದ ಸಿಟಿಯಲ್ಲಿನ ಮರಗಿಡಗಳ ಅಂಕಿಅಂಶ; ದಾವಣಗೆರೆ ಸ್ಮಾರ್ಟ್‍ಸಿಟಿಯಾಗಿದ್ದು ಇಲ್ಲಿ 6.80 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಇಲ್ಲಿನ ಜನಸಾಂದ್ರತೆಗೆ ತಕ್ಕಂತೆ ಮರಗಿಡಗಳ ಲೆಕ್ಕವೆಷ್ಟು ಎಂದು ಅಂಕಿಅಂಶಗಳನ್ನು ಸ್ಮಾರ್ಟ್‍ಸಿಟಿಯಿಂದ ಸಂಗ್ರಹಿಸಬೇಕು. ನಗರದಲ್ಲಿ ಸಿಮೆಂಟ್ ರಸ್ತೆಗಳು ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಇರುತ್ತದೆ. ತಾಪಮಾನ ತಗ್ಗಿಸಲು ಹೆಚ್ಚೆಚ್ಚು ಮರಗಿಡಗಳನ್ನು ಬೆಳೆಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ರೈತರ ಮುಖಂಡರಾದ ಮಲ್ಲೂರು ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.