ದಾವಣಗೆರೆ (Davanagere) : ರಾಜ್ಯಪಾಲರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ದವಾಗಿ ವರ್ತಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ದಾವಣಗೆರೆ ಜಿಲ್ಲಾ ಮಂಡಳಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಅಶೋಕ ರಸ್ತೆಯಲ್ಲಿನ ಕಾಂಮ್ರೆಡ್ ಪಂಪಾಪತಿ ಭವನದಿಂದ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ತೆರಳಿ ರಾಜ್ಯಪಾಲ ಹುದ್ದೆ ರದ್ದು ಮಾಡಿ, ಒಕ್ಕೂಟ ವ್ಯವಸ್ಥೆ ಉಳಿಸಿ ಎಂಬ ಘೋಷಣೆ ಅಡಿಯಲ್ಲಿ ಮನವಿ ಸಲ್ಲಿಸಿದರು.
ಸಿಪಿಐ ಸಹ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಆವರಗೆರೆ ಮಾತನಾಡಿ, ಕರ್ನಾಟಕ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಬಹುಮತದಿಂದ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಪಕ್ಷದ ಕುಟಿಲ ನೀತಿ ಬಹಿರಂಗವಾಗುತ್ತಿದೆ ಎಂದು ಕಿಡಿಕಾರಿದರು.
Read also : Davanagere | ಸೌಹಾರ್ಧತೆಯಿಂದ ಗೌರಿ ಗಣೇಶ–ಈದ್ ಮಿಲಾದ್ ಹಬ್ಬ ಆಚರಿಸಿ : ಡಿಸಿ
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮೂಡ ಬದಲಿ ನಿವೇಶನ ಹಂಚಿಕೆ ಪ್ರಕರಣವಾಗಲಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣವಾಗಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಆಗ್ರಹಿಸುತ್ತದೆ. ಆದರೆ ಮೂಡ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ,ರಾಜ್ಯಪಾಲರ ಕಚೇರಿಗೆ ಲೋಕಾಯುಕ್ತ ಸಂಸ್ಥೆ ಇತರೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ಕೇಳಿ ವರ್ಷಗಳೇ ಕಳೆದರೂ ಅವುಗಳ ಬಗ್ಗೆ ಯಾವುದೇ ತೀರ್ಮಾನ ಮಾಡದ ರಾಜ್ಯಪಾಲರು, ಮೂಡ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಮಾನ ಪೂರ್ಣ ರಾಜಕೀಯ ಪ್ರೇರಿತ ಎಂಬುದಕ್ಕೆ ಸಾಕ್ಷಿಯಾಗಿದೆ.ಈಗಾಗಲೇ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಅಂದರೆ ತಮಿಳುನಾಡು, ಕೇರಳ, ಪಾಂಡಿಚೇರಿ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಚುನಾಯಿತ ಸರ್ಕಾರಗಳ ನಡುವೆ ಸಂಘರ್ಷ ನಡೆದಿರುವುದು ಬಯಲಾಗಿದೆ ಚುನಾಯಿತ ಸರ್ಕಾರಗಳನ್ನು ಆಸ್ಥಿರಗೊಳಿಸಲು ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಳ್ಳುವ ಹಾದಿ ಹಿಡಿದಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಆವರಗೆರೆ ವಾಸು, ಶಿವಕುಮಾರ್ ಡಿ.ಶೆಟ್ಟರ್, ನೇತ್ರಾವತಿ, ಸುರೇಶ್, ವಿ.ಲಕ್ಷ್ಮಣ್, ಸರೋಜ, ಯಲ್ಲಪ್ಪ, ನಾಗೇಂದ್ರಪ್ಪ, ಚಿನ್ನಪ್ಪ, ಗುಂಡಯ್ಯ, ಕೆ.ಹೆಚ್.ಹನುಮಂತಪ್ಪ, ಮೌನಾಚಾರಿ, ತಿಪ್ಪೇಸ್ವಾಮಿ, ಐರಣಿ ಚಂದ್ರು, ಗದಿಗೇಶ್, ವಿಶಾಲಾಕ್ಷಿ, ಬಸವರಾಜಪ್ಪ, ತಿಪ್ಪೇಶ್, ಕೃಷ್ಣಪ್ಪ, ಚಮನ ಸಾಬ್ ಇತರರು ಇದ್ದರು.