ದಾವಣಗೆರೆ (Davangere): ಪ್ರೊ. ಎಸ್ ಜಿ ಸಿದ್ಧರಾಮಯ್ಯ ನೇತೃತ್ವದ ಶಾಲಾ ಸಬಲೀಕರಣ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2016ರಲ್ಲಿ ಸರ್ಕಾರ ಸ್ಥಾಪಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ. ಎಸ್‌ಜಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಿ ಶಾಲಾ ಸಬಲೀಕರಣ ಸಮಿತಿಯು ರಾಜ್ಯದ ಹಲವಾರು ಕಡೆ ಶಿಕ್ಷಣದ ಅಧ್ಯಯನ ಮಾಡಿ, ಕ್ಷೇತ್ರಾಧ್ಯಯನ ಮಾಡುತ್ತಿರುವ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಸ್ತುವಾರಿ ನಡೆಸುತ್ತಿರುವ ಅಧಿಕಾರಿಗಳಿಂದ ಅಂಕಿ ಅಂಶಗಳನ್ನು ಸಂಗ್ರಹಿಸಿ ಸರ್ಕಾರಿ ಶಾಲೆಗಳ ಸಮಗ್ರ ಮಾಹಿತಿ ಕಲೆ ಹಾಕಿದೆ. ಎಲ್ಲ ಮಕ್ಕಳು ತಮ್ಮ ಪರಿಸರದಲ್ಲಿಯೇ ಗುಣಾತ್ಮಕ, ನೈತಿಕ, ಉತ್ತಮ ಶಿಕ್ಷಣ ಪಡೆಯಲು ಈ ಸಮಿತಿ ಹೊಸ ಶೈಕ್ಷಣಿಕ ವ್ಯವಸ್ಥೆಯನ್ನು ವರದಿಯಲ್ಲಿ ಶಿಫಾರಸು ಮಾಡಿದೆ. ಆದರೆ ಎರಡು ಸರ್ಕಾರಗಳು ಬದಲಾದರೂ ಇದುವರೆಗೂ ಶಾಲಾ ಸಬಲೀಕರಣ ಸಮಿತಿಯ ವರದಿ ಜಾರಿಯಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಾಗಾಗಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತಮ್ಮ ಹಿಂದಿನ ಅವಧಿಯಲ್ಲಿ ರಚಿಸಲಾಗಿದ್ದ ಪ್ರೊ. ಎಸ್ ಜಿ ಸಿದ್ದರಾಮಯ್ಯನವರ ನೇತೃತ್ವದ ಶಾಲಾ ಸಬಲೀಕರಣ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು. ಶಾಲಾ-ಕಾಲೇಜುಗಳ ಹತ್ತಿರ ಅಕ್ರಮ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿದ್ದು, ಈ ತಂಬಾಕು ಮಾರಾಟ ಮತ್ತು ಉತ್ಪನ್ನವನ್ನು ಕಡ್ಡಾಯವಾಗಿ ತಡೆಗಟ್ಟಲು ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರದಿಂದ ಪ. ಜಾತಿ, ಪ.ಪಂಗಡದ ಜನರಿಗೆ ನೀಡಲಾಗುವ ಜಮೀನುಗಳನ್ನು ಸಮುದಾಯ ಅನಕ್ಷರತೆ ಮತ್ತು ಬಡತನವನ್ನು ದುರುಪಯೋಗಪಡಿಸಿಕೊಂಡು ಇವರಿಂದ ಭೂಮಿಯನ್ನು ಖರೀದಿಸಿದ್ದು, ಬಾಧೆಗೆ ಒಳಗಾದ ಸಮುದಾಯಗಳಿಗೆ ಪಿ.ಟಿ.ಸಿ.ಎಲ್. ಕಾಯ್ದೆಯಡಿ ಮಾರಾಟ ಮಾಡಿದ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಮೂಲ ಮಂಜೂರಿದಾರರು ಅಥವಾ ಅವರ ವಾರಸುದಾರರಿಗೆ ಭೂಮಿಯ ಹಕ್ಕನ್ನು ಮರುಸ್ಥಾಪಿಸುವ ಕುರಿತು ಪಿ.ಟಿ.ಸಿ.ಎಲ್.ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
“ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಬಹುತೇಕ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮವನ್ನು ವಹಿಸಬೇಕು” ಎಂದು ಮನವಿ ಮಾಡಿದರು.
ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಎಂ.ಲಿಂಗರಾಜು ಗಾಂಧಿನಗರ ಮಾತನಾಡಿ “ಎಸ್ ಜಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರಿ ಶಾಲಾಸಬಲೀಕರಣ ಸಮಿತಿಯ ಎಲ್ಲಾ 21 ಅಂಶಗಳನ್ನು ಜಾರಿಗೊಳಿಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ಒತ್ತಾಯಿಸಿ ಇದೇ 5ರಂದು ದಾವಣಗೆರೆಗೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲಾಗುವುದು” ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಕೆ.ಕೃಷ್ಣಪ್ಪ ಅರಕೆರೆ, ಶಿವಮೂರ್ತಿ ರಾಂಪುರ, ಧನಿಕ ತಿಮ್ಮೇನಹಳ್ಳಿ, ರಾಕೇಶ್ ಕಕ್ಕರಗೊಳ್ಳ, ತಿಪ್ಪೇಶ, ಸಿದ್ದಪ್ಪ, ಕೆ.ಮಹಮ್ಮದ್ ಹನೀಫ್, ಎ.ಹಾಲೇಶ್ ಕಕ್ಕರಗೊಳ್ಳ, ಕೆ.ಹೆಚ್.ರಾಜು, ರಮೇಶ್ ನಾಯ್ಕ ಇತರರು ಇದ್ದರು.
Read also : ಜ.5, 6 ರಂದು ರಾಜ್ಯ ಮಟ್ಟದ ಯುವಜನೋತ್ಸವ : ವಿದ್ಯಾರ್ಥಿಗಳಿಂದ ಬೃಹತ್ ಜಾಥಾ