ಚಿತ್ರದುರ್ಗ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಹಾಗೂ ರಾಜ್ಯ ವಕ್ಫ್ ಪರಿಷತ್ ಸದಸ್ಯ ಅಬ್ದುಲ್ ಘನೀ ತಾಹಿರ್ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಖುದ್ದುಸ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಅಬ್ದುಲ್ ಘನೀ ತಾಹಿರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ತಮ್ಮ ವಾರ್ಡ್ ಮತ್ತು ಹಳ್ಳಿಯಲ್ಲಿ ಅತಿ ಹೆಚ್ಚು ಮತಗಳನ್ನು ಹಾಕಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಎಲ್ಲರೂ ತಪ್ಪದೇ ತಮ್ಮ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಚುನಾವಣೆ ದೇಶದ ಬಡವರ ರಕ್ಷಣೆ ಮತ್ತು ಸಂವಿಧಾನದ ಉಳಿಗಾಗಿ ನಡೆಯುತ್ತಿರುವ ಚುನಾವಣೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಲವು ಗ್ಯಾರಂಟಿ ನೀಡುವುದಾಗಿ ಪ್ರಕಟಿಸಿದೆ. ಆದ್ದರಿಂದ ತಾವುಗಳು ಮನೆಮನೆಗೆ ತೆರಳಿ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಿ ಹೆಚ್ಚಿನ ಮತ ಪಡೆಯಲು ಶ್ರಮಿಸಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಖುದ್ದುಸ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರ ಪರ ಪ್ರಚಾರಕ್ಕಾಗಿ ಎ.15 ಸಂಜೆ 4 ಗಂಟೆಗೆ ನಗರದ ಉಮಾಪತಿ ಕಲ್ಯಾಣ ಮಂಟಪಕ್ಕೆ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ರವರು ಆಗಮಿಸುವರು. ಅಲ್ಪಸಂಖ್ಯಾತ ವಿಭಾಗದ ಎಲ್ಲಾ ಪದಾಧಿಕಾರಿಗಳು ಮುಖಂಡರು ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಚಿತ್ರದುರ್ಗ ನಗರ ಅಧ್ಯಕ್ಷ ಡಾ. ರಾಮತುಲ್ಲಾ, ಶಿಕ್ಷಕರ ಮತ್ತು ಪದವೀಧರರ ವಿಭಾಗದ ಜಿಲ್ಲಾಧ್ಯಕ್ಷರಾದ ಮುದಾಸಿರ್ ನವಾಜ್, ಉಬೆದುಲ್ಲಾ, ಚಾಂದ್ ಪೀರ್, ರಾಮತ್, ಅಕ್ಬರ್ ಭಾಷಾ, ರಾಜು ಕೀಮ್ಚಂದ್ ಜೈನ್, ಅರುಣ್ ಫ್ರಾನ್ಸಿಸ್ ಡಿಸೋಜಾ, ಕಮ್ಮು, ಶರೀಫ್, ಜಬಿ ಉಲ್ಲಾ, ನಿಜಾಮ್ ಮತ್ತಿತರರು ಉಪಸ್ಥಿತರಿದ್ದರು.