ಹರಿಹರ (Harihara): ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅವ್ಯಾಹತ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಇಲ್ಲಿನ ತಾಲ್ಲೂಕು ಕಚೇರಿ ಶಿರಸ್ತೆದಾರ್ ಸುನೀತಾರವರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ತಾಲ್ಲೂಕಿನ ಗುತ್ತೂರು, ಹರ್ಲಾಪುರ, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ರಾಜನಹಳ್ಳಿ, ಧೂಳೆಹೊಳೆ, ಇಂಗಳಗೊಂದಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಪಟ್ಟಾಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ ಈ ಹಿಂದಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಸಲಾಗಿದೆ. ಈ ವರ್ಷವೂ ಆ ಭಾಗದಲ್ಲಿಗಣಿಗಾರಿಕೆಗೆ ಸಿದ್ಧತೆ ನಡೆಸಲಾಗಿದೆ. ನದಿ ದಡದ ಈ ಗ್ರಾಮಗಳಲ್ಲಿ 20 ರಿಂದ 40 ಅಡಿಗಳ ಆಳದವರೆಗೆ ಜೆಸಿಬಿ, ಹಿಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತಾ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ ಎಂದು ಹೇಳಿದರು.
ರಾಜನಹಳ್ಳಿ ಗ್ರಾಮದಲ್ಲಿ ಅಂದಾಜು 2 ಎಕರೆಯಷ್ಟು ಸರ್ಕಾರದಿಂದ ಮಂಜೂರಾದ ಪರಿಶಿಷ್ಟ ಜನಾಂಗದವರ ರುದ್ರಭೂಮಿಯಲ್ಲೂ ಗಣಿಗಾರಿಕೆ ನಡೆಸಿ ಮೃತರ ಅಂತ್ಯ ಸಂಸ್ಕಾರ ನಡೆಸದಂತಾಗಿದೆ, ಅಲ್ಲಿನ ಪರಿಶಿಷ್ಟರು ಮೃತಪಟ್ಟರೆ ನದಿ ದಡ, ರಸ್ತೆ ಅಕ್ಕಪಕ್ಕವೇ ಅಂತ್ಯ ಸಂಸ್ಕಾರ ಮಾಡುವ ದುಸ್ಥಿತಿ ಇದೆ ಎಂದರು.
3 ಅಡಿಯಷ್ಟು ಮಾತ್ರ ಜಮೀನುಗಳನ್ನು ಸಮತಟ್ಟ ಮಾಡಲು ಅನುಮತಿಯೊಂದಿಗೆ ಅವಕಾಶವಿದೆ, 3 ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದ್ದರೂ ತಾಲ್ಲೂಕು, ಜಿಲ್ಲಾಡಳಿತ, ಪರಿಸರ ಮತ್ತು ಕೃಷಿ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ. ಮಣ್ಣು ಗಣಿಗಾರಿಕೆ ಈಗ ಆರಂಭಿಸಲು ಪಟ್ಟಭದ್ರರು ಈಗಾಗಲೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ ವ್ಯಾಪಾರ ಕುದುರಿಸುತ್ತಿದ್ದಾರೆ. ಈ ಹಿಂದಿನ ಹತ್ತಾರು ವರ್ಷಗಳ ಕಾಲ ನಡೆಸಿರುವ ಅಕ್ರಮ ಮಣ್ಣುಗಣಿಗಾರಿಕೆಯಿಂದ ತಾಲ್ಲೂಕಿನ ಪರಿಸರ ನಲುಗಿರುವುದು ಸಾಕಾಗಿದೆ.
ಈ ವರ್ಷವೂ ಗಣಿಗಾರಿಕೆಗೆ ಅವಕಾಶ ನೀಡಿದರೆ ತಾಲ್ಲೂಕಿನ ಭೌಗೋಳಿಕ ರಚನೆ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಜಮೀನಿನ ರೈತತನ್ನಜಮೀನಿನ ಮಣ್ಣನ್ನು ಮಾರಿಕೊಂಡು 20 ಅಡಿ ಗುಂಡಿ ಸೃಷ್ಟಿಸಿದರೆ ಪಕ್ಕದ ಜಮೀನಿನ ಬಡ ರೈತನಿಗೆ ಕೃಷಿ ಕಾಯಕ ನಡೆಸಲು ಹೇಗೆ ಸಾಧ್ಯವಾಗುತ್ತದೆ.ಇದು ತಾಲ್ಲೂಕಿನ ನದಿ ದಡದ ಜೈವಿಕ, ಭೌಗೋಳಿಕ ಸ್ಥಿತಿಗಳನ್ನು ಏರುಪೇರು ಮಾಡುವ ಅಪಾಯವಿದೆ.
ಈವರೆಗೆ ನಡೆದಿರುವ ಅಕ್ರಮಗಣಿಗಾರಿಕೆ ಗಮನಿಸಿದರೆ ಹರಿಹರವು ರಿಪಬ್ಲಿಕ್‍ಆಫ್‍ಬಳ್ಳಾರಿ ಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೆ ಎಂಬ ದಟ್ಟ ಅನುಮಾನ ಮೂಡುತ್ತಿದೆ. ಕೂಡಲೆರಾಜ್ಯ ಸರ್ಕಾರವು ತಾಲ್ಲೂಕಿನ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ದ್ರೋಣ್ ಯಂತ್ರದ ಸಹಾಯ ಪಡೆಯಬೇಕು, ಇದಕ್ಕೆ ಸಹಕಾರ ನೀಡಿದ ಆರೋಪ ಇರುವ ಕಂದಾಯ, ಪರಿಸರ, ಪೆÇಲೀಸ್, ಕೃಷಿ ಇಲಾಖೆಗಳ ಹಿಂದಿನ, ಈಗಿನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಾಕಮ್ಮ, ಬಸವರಾಜಪ್ಪ, ಸಂಜೀವ್, ಸುನೀತಾ, ಶೈಲು, ಅಣ್ಣಪ್ಪ, ರೇಣುಕಮ್ಮ, ಬಸವರಾಜ್, ಹರೀಶ್, ಶಿವಣ್ಣ, ಹನುಮಮತಪ್ಪ, ಹಾಲಮ್ಮ, ಮುಬೀನಾ, ವೀರೇಶ್, ಸಂತೋಷ, ಪರಮೇಶ್, ನಾಗಪ್ಪ, ನಾಗರಾಜ್, ಮಂಜು, ನೀಲಪ್ಪ, ಹಾಲಮ್ಮ, ಲಕ್ಷ್ಮಣ ರೆಡ್ಡಿ ಇದ್ದರು.
Read also : kannada short story: ಸಿಂಧು