ಹರಿಹರ : ನೀಟ್ ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದ್ದು, ಈ ಸಂಬಂಧ ಕೇಂದ್ರ ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಹರಿಹರ ತಹಶೀಲ್ದಾರ್ ಅವರ ಮುಖಾಂತರ ದಲಿತ ವಿದ್ಯಾರ್ಥಿ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನೆಟ್ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಅಕ್ರಮಗಳ ಗದ್ದಲದಲ್ಲಿರುವ ಕೇಂದ್ರ ಸರ್ಕಾರ (26/06/2024) ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಕೂಡ ಕೊನೆಯ ಕ್ಷಣದಲ್ಲಿ ಮುಂದೂಡಿಕೆ ಮಾಡಿ ಆದೇಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ನೇಮಕಾತಿಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗ್ತಿದ್ದು ಇತಿಹಾಸ. ಇದನ್ನೂ ಮೀರಿ ಈಗ ಕಠಿಣ ಪರೀಕ್ಷೆಗಳಾದ ನೀಟ್-ನೆಟ್ ಕೂಡ ಅಕ್ರಮದ ಗೂಡುಗಳಾಗಿ ಮಾರ್ಪಟ್ಟಿವೆ. ಲಕ್ಷ ಲಕ್ಷ ಹಣಕ್ಕೆ ಪ್ರಶ್ನೆ ಪತ್ರಿಕೆಗಳು ಬಿಕರಿಯಾಗಿರುವ ಆರೋಪ ಕೇಳಿಬಂದಿದೆ. ಪರೀಕ್ಷೆಗಳ ಪಾವಿತ್ರ್ಯತೆಗೆ ಭಂಗ ತಂದಿದ್ದು ಅಭ್ಯರ್ಥಿಗಳನ್ನು ಕಂಗೆಡಿಸಿವೆ. ಈ ಕೂಡಲೇ ಕೇಂದ್ರ ಶಿಕ್ಷಣ ಸಚಿವರನ್ನು ವಜಾ ಮಾಡಿ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೇಂದ್ರವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮಹಾನಿರ್ದೇಶಕ ಸುಬೋಧ್ ಸಿಂಗ್ ಅವರನ್ನು ವಜಾಗೊಳಿಸಿದೆ. ಏಜೆನ್ಸಿಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಮತ್ತು ಪರೀಕ್ಷಾ ಸುಧಾರಣೆಗಳನ್ನು ಶಿಫಾರಸು ಮಾಡಲು ಇಸ್ರೊ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಿದ್ದು ಸ್ವಾಗತ ಆದರೆ ಪದೇ ಪದೇ ಪರೀಕ್ಷೆಯಲ್ಲಿನ ಅಕ್ರಮಗಳಿಂದ ಲಕ್ಷಾಂತರ ಪರೀಕ್ಷಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಅದ್ದರಿಂದ ಎರಡು ಪರೀಕ್ಷೆಯಲ್ಲಿ ನಡೆದ ಅಕ್ರಮದ ಸಂಪೂರ್ಣ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ನಡೆಸಲು ವಿಫಲಗೊಂಡಿರುವ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಸಚಿವರಿಗೆ ಮತ್ತು ಇಲಾಖೆಗಳ ಅಧಿಕಾರಿಗಳಿಗೆ ವಜಾಗೊಳಿಸಬೇಕು ಇದರ ಜೊತೆಗೆ ಶೈಕ್ಷಣಿಕ ಸೀಟ್ ಹಂಚಿಕೆ ಮಾಡಲು ನೀಟ್ – ನೆಟ್ ಪರೀಕ್ಷೆ ನಡೆಸುವ ಅಧಿಕಾರವನ್ನು ಆಯಾ ರಾಜ್ಯಗಳ ಸರ್ಕಾರಕ್ಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಸಂಚಾಲಕ ಸಾಬೀರ್ ಜಯಸಿಂಹ. ಹರಿಹರ ತಾಲೂಕು ಸಂಚಾಲಕ ವಿಜಯ್ ಕುಮಾರ್ ಜಿಗಳಿ, ನಗರ ಘಟಕದ ಸಂಚಾಲಕ ಯಮನೂರು, ಸಮಾಜ ಸೇವಕ ಸನಾವುಲ್ಲ ಅಫ್ಸರ್, ಅದ್ನಾನ್ ಮತ್ತಿತರರು ಉಪಸ್ಥಿತರಿದ್ದರು.