ದಾವಣಗೆರೆ (Davanagere) : ದಾವಣಗೆರೆ ತಾಲ್ಲೂಕಿನ 18 ಗೊಲ್ಲರಹಳ್ಳಿಗಳಲ್ಲಿ ವಾಸವಾಗಿರುವ ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಕಾಡುಗೊಲ್ಲ ಎಂದು ನಮೂದಿಸಿ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆ ಕಾಡುಗೊಲ್ಲರ ಸಂಘ (Davanagere Kadugollar Sangha)ದ ತಾಲ್ಲೂಕು ಘಟಕ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಂ. ಕೆಂಪಣ್ಣ ಮಾತನಾಡಿ, ಪ್ರವರ್ಗ 1 ರಲ್ಲಿ ಬರುವ ಕಾಡುಗೊಲ್ಲ ಜನಾಂಗಕ್ಕೆ ಸೇರಿರುವ ಇಲ್ಲಿನವರು ಮೂಲತ: ಕಾಡುಗೊಲ್ಲರಾಗಿದ್ದು, ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಎಂಬ ಜಾತಿ ಇಲ್ಲದ ಕಾರಣ ಶಾಲೆಗೆ ಸೇರುವಾಗ ಅನಿವಾರ್ಯವಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಗೊಲ್ಲ ಎಂದು ಶಾಲಾ ದಾಖಲಾತಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರ ಉಲ್ಲೇಖ (1)ರ ದಿನಾಂಕ 29-01-2018 ರ ಪತ್ರದಲ್ಲಿ ಪ್ರವರ್ಗ-1 ರ ಕ್ರ.ಸಂ 86 (ಎಕ್ಸ್) ರಲ್ಲಿ ಈಗಾಗಲೇ ಕಾಡುಗೊಲ್ಲ ಎಂದು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಆದೇಶಿಸಲಾಗಿದೆ. ಉಲ್ಲೇಖಿತ 2, 3 ಹಾಗೂ 4 ರ ಪತ್ರಗಳಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಿ ಸ್ಪಷ್ಟವಾಗಿ ಆದೇಶಿಸಿದೆ. ಈಗಾಗಲೂ ತಹಶಿಲ್ದಾರರ ಕಚೇರಿಗೆ ಹಲವು ಬಾರಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಕೋರಿದಾಗ್ಯೂ ಅರ್ಜಿ ತಿರಸ್ಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಪಾವಗಡ, ಗುಬ್ಬ, ಶಿರಾ, ತಿಪಟೂರು, ತುರುವೇಕೆರೆ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಪಳ್ಳಕೆರೆ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲೂಕುಗಳು ಉರ್ಹರಿಗೆ ಸರ್ಕಾರದ ಸುತ್ತೋಲೆಗಳ ಪ್ರಕಾರ ಪರಿಶೀಲನೆ ನಡೆಸಿ ಕಾಡುಗೊಲ್ಲ ಎಂದು ದೃಢೀಕರಣ ಪತ್ರ ನೀಡಲಾಗಿದೆ. ಹಾಗಿದ್ದರೂ ದಾವಣಗೆರೆ ತಾಲ್ಲೂಕಿನಲ್ಲಿ ನೀಡುತ್ತಿಲ್ಲ ಎಂದು ಅವರು ಬೇಸರ ಹೊರಹಾಕಿದರು.
Read also : davanagere | ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಕಾಡುಗೊಲ್ಲರಿಗೆ ಸಂಬಂಧಪಟ್ಟಂತೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಬೆಂಗಳೂರು ಇವರಿಂದ ವಿವಿಧ ಯೋಜನೆಗಳಿಗೆ ಸಂಬಂಧಪಟ್ಟಂತೆ ಸವಲತ್ತು ನೀಡಲು ಪ್ರಕಟಣೆ ಹೊರಡಿಸಿದ್ದು, ಆ.31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಸಂಬಂಧ ಕಾಡುಗೊಲ್ಲ ಎಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಪ್ರಯುಕ್ತ ಅರ್ಜಿ ಸಲ್ಲಿಸುವ ಅರ್ಹರಿಗೆ ಕಾಡುಗೊಲ್ಲ ಎಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕೆಂದು ಅವರು ಮನವಿ ಮಾಡಿದರು.