ದಾವಣಗೆರೆ (Davanagere): ರಾಜ್ಯ ಸರಕಾರ ಸುರ್ಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿ ಮಾಡಬೇಕು , ಒಳಮೀಸಲಾತಿ ಜಾರಿಗೆ ಬರುವವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ನೀಡಬೇಕು ಎಂದು ಆಗ್ರಹಿಸಿ ಮಾದಿಗ -ಛಲವಾದಿ ಸಮಾಜದ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಅ.23 ರಂದು ಆಯೋಜಿಲಾಗಿದೆ ಎಂದು ಎರಡು ಸಮುದಾಯದ ಮುಖಂಡರು ಹೇಳಿದರು.
ಈ ಕುರಿತು ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎರಡು ಸಮುದಾಯ ಮುಖಂಡರು, ಈ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎರಡು ಸಮುದಾಯದ ಭಾಂದವರು ಪಾಲ್ಗೊಳ್ಳಿದ್ದಾರೆ. ಈ ಮೂಲಕ ಶೀಘ್ರ ಒಳಮಿಸಲಾತಿ ಅನುಷ್ಠಾನಕ್ಕೆ ಒತಾಯಿಸಲಿದ್ದೇವೆ ಎಂದರು.
ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್ ಮಾತನಾಡಿ, ಅಸ್ಪೃಶ್ಯರಿಗೆ ಡಾ. ಅಂಬೇಡ್ಕರ್ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ನೀಡಿದ್ದಾರೆ. 1970ರ ದಶಕದಲ್ಲಿ ಸ್ಲೃಶ ಸಮುದಾಯಗಳನ್ನು ಪ. ಜಾತಿಗಳ ಪಟ್ಟಿಗೆ ಸೇರಿಸಿದ್ದು, ಆ ಸಮಯದಲ್ಲಿ ಅವರಿಗೆ ಅಗತ್ಯವಿತ್ತೋ ಅಥವಾ ಆ ಕಾಲಘಟ್ಟಕ್ಕೆ ಅದನ್ನು ಸೇರ್ಪಡೆಗೊಳಿಸಿದ್ದಾರೆ. ಆದರೆ, ಮುಂದುವರಿದ ಸಾಮಾಜಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಕ್ರಮೇಣ ಅವರಿಗೇ ಮಾತ್ರವೇ ಪ.ಜಾತಿಯಲ್ಲಿನ ಅವಕಾಶಗಳು ಸಿಕ್ಕಿದವು. ಆದರೆ , ಅಸ್ಪೃಶ್ಯರಾದ ನಾವು ಅಂದಿನಿಂದಲೂ ಇಂದಿನವರೆಗೂ ಕೂಡ ಅವಮಾನಕರ ಪರಿಸ್ಥಿತಿಯಲ್ಲಿದ್ದೇವೆ. ಅತ್ಯಂತ ಕೆಳ ಸಮುದಾಯದ ಅಸ್ಪೃಶ್ಯರಾದ ನಮಗೆ ಶೈಕ್ಷಣಿಕ ಮತ್ತು ಉದ್ಯೋಗ, ಆರ್ಥಿಕವಾಗಿ ಮೀಸಲಾತಿಯಲ್ಲಿ ವಂಚನೆಯಾಗಿದೆ ಎಂದು ಹೇಳಿದರು.
ದಾವಣಗೆರೆ ಬಹಳ ಹಿಂದಿನಿಂದಲೂ ದಲಿತ ಹೋರಾಟದ ಜಿಲ್ಲೆ. ದೇಹಕ್ಕೆ ಎರಡೂ ಕೈಗಳಂತೆ ಮಾದಿಗ ಮತ್ತು ಛಲವಾದಿ ಸಮುದಾಯಗಳು ಸೋದರ ಸಮುದಾಯಗಳು. ಎರಡು ಸಮುದಾಯಗಳು ಒಟ್ಟಿಗೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸುತ್ತಿದ್ದೇವೆ. ಹಾಗಾಗಿ ಸರ್ಕಾರ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸಬೇಕು ಮತ್ತು ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಛಲವಾದಿ ಸಮುದಾಯದ ನಿವೃತ್ತ ಡಿವೈಎಸ್ಪಿ ರುದ್ರಮುನಿ ಮಾತನಾಡಿ, ಅಸ್ಪೃಶ್ಯರಿಗೆ ಎಲ್ಲಾ ರಂಗಗಳಲ್ಲೂ ಅನ್ಯಾಯವಾಗಿದೆ. ನಾವು ಸರ್ಕಾರದ ಅನುಕಂಪ ಬಯಸಿಲ್ಲ. ಸಂವಿಧಾನಿಕ ಹಕ್ಕನ್ನು ಕೇಳುತ್ತಿದ್ದೇವೆ. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆದೇಶವನ್ನು ಜಾರಿಗೆ ತರಲು ಮೀನಾಮೇಷ ಎಣಿಸಲಾಗುತ್ತಿದೆ. ಇದನ್ನು ಮಾದಿಗ ಮತ್ತು ಚಲವಾದಿ ಸಮುದಾಯಗಳಾದ ನಾವು ಎರಡು ಸಮಾಜಗಳು ಖಂಡನೆ ಮಾಡುತ್ತೇವೆ. ಅವರಿಗೆ ಒಳಮಿಸಲಾತಿ ಜಾರಿಗೊಳಿಸಲು ಸಮರ್ಪಕ ದತ್ತಾಂಶಗಳು ಕೂಡ ಲಭ್ಯವಿದೆ. ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅವುಗಳನ್ನು ಬಳಸಿ ಜಾರಿಗೆ ಅವಕಾಶವಿದೆ. ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೆ ಇಚ್ಚಾಶಕ್ತಿ ಇಲ್ಲ. ಇದನ್ನು ವಿರೋಧಿಸಿ ದಾವಣಗೆರೆಯಲ್ಲಿ ಅ. 23 ರಂದು ಶಾಂತಿಯುತ ಮೆರವಣಿಗೆ, ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಾರಿಯಾಗುವವರೆಗೆ ಅಮರಣಾಂತ ಹೋರಾಟ ಮಾಡುತ್ತೇವೆ ಎಂದರು.
ಒಳಮೀಸಲಾತಿ ಜಾರಿ ಗೊಳಿಸಬೇಕು. ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕು. ಪ. ಜಾತಿಗಳಲ್ಲಿನ ವಿವಿಧ ಸೌಲಭ್ಯಗಳು ಮತ್ತು ಹಣಕಾಸು ಸೌಲಭ್ಯಗಳನ್ನು ಕೂಡ ಒಳಮೀಸಲಾತಿ ಜಾರಿಯಾಗುವವರೆಗೆ ತಡೆಹಿಡಿಯಬೇಕು ಎಂಬ ಮೂರು ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಿವೃತ್ತ ಅಧಿಕಾರಿ ಪುರುಷೋತ್ತಮ ಮಾತನಾಡಿ, ಎಸ್ ಎಂ ಕೃಷ್ಣ ಸರ್ಕಾರ ಸದಾಶಿವ ಆಯೋಗ ರಚಿಸಿ ವರದಿ ನೀಡಲು ತಿಳಿಸಿತು. ಆಯೋಗದ ವರದಿಗೆ ಬಿಎಸ್ವೈ ಚಾಲನೆ ನೀಡಿದರು. ಸದಾಶಿವ ಆಯೋಗದ ವಿಸ್ತೃತ ವರದಿ ಇದೆ. 2008ರಲ್ಲಿ ಚಿತ್ರದುರ್ಗದ ಮಾದಾರ ಪೀಠದಲ್ಲಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಎಲ್ಲರೂ ಭಾಗವಹಿಸಿದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ – ” ಮೀಸಲಾತಿ, ಇದು ಭಿಕ್ಷೆ ಅಲ್ಲ, ಅದು ನಿಮ್ಮ ಹಕ್ಕು” ಎಂದು ಹೇಳಿಕೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿತ್ತು, ಅವರು ಅಹಿಂದ ಚಳವಳಿಯ ನೇತೃತ್ವ ವಹಿಸಿದ್ದರು. ಹಾಗಾಗಿ ಇವರು ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯ ಪರವಾಗಿ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಜಾರಿಗೆ ಖಚಿತ ನಿಲುವು ಇದುವರೆಗೂ ತೆಗೆದುಕೊಳ್ಳದಿರುವುದು ಸಮುದಾಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್ ಏಳು ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರಕ್ಕೆ ವಿವೇಚನಾ ಅಧಿಕಾರವಿದೆ. ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಬಹುದು ಎಂದು ತೀರ್ಪು ನೀಡಿದರೂ ಸಹ ಸಿಎಂ ಸಿದ್ದರಾಮಯ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಒಳಮೀಸಲಾತಿ ಶೀಘ್ರ ಅನುಷ್ಠಾನಕ್ಕೆ ಅಕ್ಟೋಬರ್ 24ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಿ. ಇಲ್ಲವಾದಲ್ಲಿ ಉತ್ತರ ಭಾರತದ ಗುಜ್ಜಾರ್ ಸಮುದಾಯದಂತೆ ನಾವು ಕೂಡ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
Read Also : Harihara | ನಗರಸಭೆ ಅಧ್ಯಕ್ಷ್ಯೆ ಹಾಗೂ ಆಯುಕ್ತರಿಂದ ಜಿಲ್ಲಾಸ್ಪತ್ರೆಗೆ ಭೇಟಿ, ಸಾಂತ್ವಾನ
ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲೇಶ್ ಮಾತನಾಡಿ, ಇದು ಮಾದಿಗ ಛಲವಾದಿ ಸೇರಿದಂತೆ ಎಲ್ಲರ ಒಕ್ಕೊರಲ ಹೋರಾಟ. ಸುಪ್ರೀಂ ಕೋರ್ಟ್ ತೀರ್ಪು ಜಾರಿಯಾದ ನಂತರ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ನಂತರ ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದು ಬೇರೆ ಕಾರಣಕ್ಕೆ ಮುಂದೆ ಹೋಗಬಾರದು. ಒಳ ಮೀಸಲಾತಿ ಜಾರಿಯ ವಿಳಂಬ ಕಾರಣಕ್ಕೆ ಗೊತ್ತಿಲ್ಲ. ನಮಗೆ ಸಾಂವಿಧಾನಿಕ ಹಕ್ಕುಗಳು ಒದಗಿಸಿಕೊಡಬೇಕು. ಚುನಾವಣೆ ಕಾರಣಕ್ಕಾದರೂ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಉದಯಕುಮಾರ್, ಪಾಲಿಕೆ ಮಾಜಿ ಸದಸ್ಯ ಹಾಲೇಶ್, ಪೌರ ನೌಕರರ ಸಂಘದ ಗೋವಿಂದರಾಜ್, ದಲಿತ ಮುಖಂಡರಾದ ಆಲೂರು ನಿಂಗರಾಜ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ, ಸೋಮಲಾಪುರದ ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ನಾಗಭೂಷಣ್, ಹಿರಿಯ ಪತ್ರಕರ್ತ ಏಕಾಂತಪ್ಪ, ಬಿ.ಎಂ. ನಿರಂಜನ್, ಸಾಗರ್, ರಾಮಯ್ಯ, ಹರಿಹರ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ, ಮಹಾಲಿಂಗಪ್ಪ, ಎಚ್ ಕೆ ಬಸವರಾಜ, ಶೇಖರಪ್ಪ, ನೀಲಗಿರಿಯಪ್ಪ, ಗೋವಿಂದರಾಜ್, ಅಂಜಿನಪ್ಪ, ಜಯಪ್ರಕಾಶ್, ಓಂಕಾರಪ್ಪ ಹಾಗೂ ಮಾದಿಗ ಮತ್ತು ಚಲವಾದಿ ಸಮಾಜದ ಮುಖಂಡರುಗಳು, ದಲಿತ ಸಂಘಟನೆಯ ಕಾರ್ಯಕರ್ತರುಗಳು ಭಾಗವಹಿಸಿದ್ದರು.