ದಾವಣಗೆರೆ: ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧಿಸಿರುವ ಪೊಲೀಸರು 67 ಸಾವಿರ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಶಾಂತಿ ನಗರದ ಕಿರಣ ನಾಯ್ಕ ಬಂಧಿತ ಆರೋಪಿ.
ಬೆಂಗಳೂರಿನ ಸೌಮ್ಯ ಎಂಬುವರು ಮೇ 20ರಂದು ದಾವಣಗೆರೆಯ ಕೆಇಬಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಬಂಧಿಕರ ಮದುವೆಗೆ ಬಂದಿದ್ದರು. ಇವರು ತಂಗಿದ್ದ ರೂಮಿನ ಬೀಗ ಮುರಿದು ಬಟ್ಟೆ ಬ್ಯಾಗಿನಲ್ಲಿದ್ದ 12.5 ಗ್ರಾಂ ತೂಕದ ಚಿನ್ನಾಭರಣ ಹಾಗೂ 3500 ರೂ. ಕಳ್ಳತನವಾಗಿತ್ತು. ಈ ಬಗ್ಗೆ ಸೌಮ್ಯ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು.
ಆರೋಪಿ ಕಿರಣ ನಾಯ್ಕನನ್ನು ಬಂಧಿಸಿರುವ ಕೆಟಿಜೆ ನಗರ ಪೊಲೀಸರು, ಈತನಿಂದ 67 ಸಾವಿರ ರೂ. ವೌಲ್ಯದ 10.5 ಗ್ರಾಂ ತೂಕದ ಬಂಗಾರದ ಆಭರಣ ವಶ ಪಡಿಸಿಕೊಂಡು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಈಗಾಗಲೇ ವಿದ್ಯಾ ನಗರ ಪೊಲೀಸ್ ಠಾಣೆ, ಬಡಾವಣೆ ಠಾಣೆ ಹಾಗೂ ಬಸವ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿ ವಿಚಾರಣೆಯಲ್ಲಿವೆ.