ದಾವಣಗೆರೆ (Davanagere): ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆ, ಅಕ್ಕಪಕ್ಕದ ಮರ‍್ನಾಲ್ಕು ಜಿಲ್ಲೆಗಳ ಬಡ ರೋಗಿಗಳ ಜೀವನಾಡಿ. ಆದರೆ ವೆಂಟಿಲೇಟರ್ ಕೊರತೆಯಿಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ. ಭರಿಸದೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಸರ್ಕಾರ ವೆಂಟಿಲೇಟರ್ ಸಂಖ್ಯೆ ಹೆಚ್ಚಿಸಬೇಕು. ಶಿಥಿಲಗೊಂಡ ಜಿಲ್ಲಾಸ್ಪತ್ರೆ ಪುನರ್ ನಿರ್ಮಾಣ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹಿಸಿದರು.
ಶುಕ್ರವಾರ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆಯೋತ್ತರ ವೇಳೆಯಲ್ಲಿ ಮಾತನಾಡಿದ ಶಾಸಕರು, ನನ್ನ ಕ್ಷೇತ್ರವಲ್ಲದೇ, ಸುತ್ತಮುತ್ತಲ ಜಿಲ್ಲೆಗಳ ಬಡವರು, ಕೂಲಿ ಕಾರ್ಮಿಕರು, ರೈತರು ಜಿಲ್ಲಾ ಆಸ್ಪತ್ರೆಯನ್ನೇ ಆಶ್ರಯಿಸಿದ್ದಾರೆ. ಕೋವಿಡ್ ವೇಳೆ ಹಿಂದಿನ ಜಿಲ್ಲಾಧಿಕಾರಿಗಳು 10 ವೆಂಟಿಲೇಟರ್ ತರಿಸಿದ್ದರು.ಆದರೆ ಬರೀ ಆಕ್ಸಿಜನ್‌ನಲ್ಲಿ ಚಿಕಿತ್ಸೆ ಕೊಟ್ಟು, 10 ವೆಂಟಿಲೇಟರ್ ಮೂಲೆಗೆ ಸರಿಸಿದರು. ಆಸ್ಪತ್ರೆಯಲ್ಲಿ ಕೇವಲ 5 ಔಷಧಿ ವೆಂಟಿಲೇಟರ್ ಮಾತ್ರ ಇವೆ. ಇದರಲ್ಲಿ ಒಂದು ಒಬಿಜಿಗೆ ಇಟ್ಟಿದ್ದಾರೆ, ಇವು ಸಾಕಾಗಲ್ಲ. ಏಕೆಂದರೆ ಪ್ರತಿನಿತ್ಯ ಎರಡು ಸಾವಿರ ಹೊರ ರೋಗಿಗಳು ಬರುತ್ತಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆರೋಗ್ಯ ಸಚಿವರೂ ಕೂಡ ಭೇಟಿ ನೀಡಿದಾಗ ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆಯಾಗಿದೆ.
ಇಲ್ಲಿಂದ ರೆಫರ್ ಮೇಲೆ ಖಾಸಗಿ ಆಸ್ಪತ್ರೆಗೆ ಹೋಗುವ ಒಬ್ಬ ರೋಗಿಗೆ ವೆಂಟಿಲೇಟರ್ ಹಾಕಲು ದಿನಕ್ಕೆ 25 ಸಾವಿರದಂತೆ ನಾಲ್ಕು ದಿನಕ್ಕೆ 1 ಲಕ್ಷ ರೂ. ಭರಿಸಬೇಕಿದೆ. ಬಡವರು ಇಷ್ಟೊಂದು ಹಣ ಎಲ್ಲಿಂದ ತÀರಬೇಕು ಎಂದು ಪ್ರಶ್ನಿಸಿದ ಶಾಸಕರು, ವೆಂಟಿಲೇಟರ್ 20 ಇವೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅಷ್ಟು ಇಲ್ಲ, ಕೂಡಲೇ ಆರೋಗ್ಯ ಸಚಿವರು 20ಕ್ಕೂ ಹೆಚ್ಚು ವೆಂಟಿಲೇಟರ್, ಐಎಂಆರ್ ಸ್ಕಾ್ಯನಿಂಗ್ ಸೌಲಭ್ಯ ಕಲ್ಪಿಸಿ ಬಡವರ ಜೀವ ಕಾಪಾಡಬೇಕೆಂದು ಒತ್ತಾಯಿಸಿದರು.
ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕರು ಐದು ಇವೆ ಎಂದು ಹೇಳುತ್ತಿದ್ದಾರೆ. ನಮ್ಮ ಮಾಹಿತಿ ಪ್ರಕಾರ, ಜಿಲ್ಲಾಸ್ಪತ್ರೆಯಲ್ಲಿ 46 ವೆಂಟಿಲೇಟರ್ ಇವೆ. ಅದರಲ್ಲಿ 21 ವೆಂಟಿಲೇಟರ್ ಕೆಲಸ ಮಾಡುತ್ತಿವೆ. ಇನ್ನುಳಿದ 25 ವೆಂಟಿಲೇಟರ್ ದುರಸ್ತಿಯಲ್ಲಿವೆ. ಇವು ಪಿಎಂ ಕೇರ್‌ನಡಿ ಬಂದವು. ನಿರ್ವಹಣೆ ಇಲ್ಲದೆ ದುರಸ್ತಿಯಲ್ಲಿವೆ. 21 ವೆಂಟಿಲೇಟರ್ ಕೆಲಸ ಮಾಡುತ್ತಿವೆ ಎಂಬ ಸ್ಪಷ್ಟ ಮಾಹಿತಿ ಇದೆ. ಒಂದು ವೇಳೆ ಇಲ್ಲದಿದ್ದರೆ ಮತ್ತೊಮ್ಮೆ ಪರಿಶೀಲಿಸಿ ಸರಿಪಡಿಸುತ್ತೇವೆ. ಇನ್ನು ಎಂಐಆರ್ ಸ್ಕಾ್ಯನಿಂಗ್ ಕೇಳಿದ್ದಾರೆ. 14 ಜಿಲ್ಲೆಗಳಿಗೆ ಪಿಪಿಪಿ ಮಾದರಿಯಲ್ಲಿ ಎಂಆರ್‌ಐ ಸ್ಕಾ್ಯನಿಂಗ್ ಕೊಡಲು ಈಗಾಗಲೇ ತೀರ್ಮಾನಿಸಿದ್ದೇವೆ. ಅಲ್ಲದೇ ಮೈಸೂರು ಮತ್ತು ದಾವಣಗೆರೆಗೆ ಸರ್ಕಾರದಿಂದಲೇ ಖರೀದಿಸಿ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾಸ್ಪತ್ರೆ ಶಿಥಿಲಗೊಂಡು ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಕಟ್ಟಡ ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ 200 ಕೋಟಿಗಿಂತ ಹೆಚ್ಚು ಅನುದಾನದಿಂದ ಸಂಪೂರ್ಣ ಪುನರ್ ನಿರ್ಮಾಣ ಮಾಡುವುದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಶಾಸಕರ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ವೆಂಟಿಲೇಟರ್ ಕೊರತೆ ಬಗ್ಗೆ ಎತ್ತಿದ ಪ್ರಶ್ನೆಗೆ ಬಹುತೇಕ ಶಾಸಕರು ಬೆಂಬಲಿಸಿ ಅವರ ಕ್ಷೇತ್ರಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಎಬಿಆರ್‌ಕೆ ಅಡಿ ಜಿಲ್ಲಾಸ್ಪತ್ರೆಯಿಂದ ರೆಫರ್ ತೆಗೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ವೆಂಟಿಲೇಟರ್ ಸೌಲಭ್ಯ ನೀಡಲು ನಿರಾಕರಿಸಿ, 25 ಸಾವಿರ ಭರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಬೇಕು. ಅದೇ ರೀತಿ ನನ್ನ ಕ್ಷೇತ್ರ ಸಾಕಷ್ಟು ಹಿಂದುಳಿದಿದ್ದು, ಮಾಯಕೊಂಡದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
Read also : ಅಪಘಾತ : ತಾತಾ, ಮೊಮ್ಮಗ ಮೃತ
ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಇದೇ ವೇಳೆ ಜಿಲ್ಲಾಸ್ಪತ್ರೆ ಪುನರ್ ನಿರ್ಮಾಣ ಮತ್ತು ಎಂಆರ್‌ಐ ಸ್ಕಾ್ಯನಿಂಗ್ ಮಂಜೂರು ಮಾಡಿದ ಸಚಿವರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಅಭಿನಂದನೆ ಸಲ್ಲಿಸಿದರು.
ಗುಣಗಾನ ಮಾಡಿದ ಆರೋಗ್ಯ ಸಚಿವ…
ಸದನದಲ್ಲಿ ಸತತವಾಗಿ 20 ನಿಮಿಷಗಳ ಕಾಲ ಬಡವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ. ಹೀಗಾಗಿಯೇ ಜನರಿಗೆ ಏನು ಬೇಕು, ಆ ವಿಷಯದ ಬಗ್ಗೆ ಸದನದಲ್ಲಿ ದ್ವನಿ ಎತ್ತಿ ಜನಪರ ಕಾಳಜಿ ತೋರಿಸಿದ್ದಾರೆ. ಅಲ್ಲದೇ ಶಾಸಕರಾಗುವುದಕ್ಕೂ ಮೊದಲ ಜಿಲ್ಲಾಸ್ಪತ್ರೆಯೊಂದಿಗೆ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ನನಗೆ ಅರಿವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.