ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4 ರಂದು ಬೆಳಗ್ಗೆ 6.30 ರಿಂದ ಭದ್ರತಾ ಕೊಠಡಿ ತೆರೆಯುವ ಮೂಲಕ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಮತ ಎಣಿಕೆ ನಡೆಯಲಿದ್ದು ಚುನಾವಣಾ ಕಣದಲ್ಲಿದ್ದ 30 ಅಭ್ಯರ್ಥಿಗಳ ಫಲಿತಾಂಶ ಮಧ್ಯಾಹ್ನದೊಳಗೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಸೇರಿ 8 ಕ್ಷೇತ್ರಗಳ ಎಣಿಕೆಯು ಶಿವಗಂಗೋತ್ರಿಯಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು ಗರಿಷ್ಠ 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಣಿಕೆ ನಡೆದ ನಂತರ ಮುಂದಿನ ಸುತ್ತು ಎಣಿಕೆ ಆರಂಭಿಸಲಾಗುತ್ತದೆ ಎಂದರು.
ಪ್ರತಿ ಎಣಿಕೆ ಟೇಬಲ್‍ಗಳಲ್ಲಿ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ, ಒಬ್ಬರು ಮೈಕ್ರೋ ಅಬ್ಸರ್‍ವರ್ ನೇಮಕ ಮಾಡಿದ್ದು ಎಲ್ಲಾ 8 ಕ್ಷೇತ್ರಗಳಿಗೆ 336 ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಿ ಎರಡು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಮುಕ್ತಾಯದ ನಂತರ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ನಡೆಯಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಮತಗಟ್ಟೆಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುತ್ತದೆ ಎಂದರು.
ಅಂಚೆ ಮತ ಎಣಿಕೆಗೆ ಪ್ರತ್ಯೇಕ ಟೇಬಲ್
85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರ, ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು, ಚುನಾವಣಾ ಕರ್ತವ್ಯ ನಿರತರು ಸೇರಿದಂತೆ 4918 ಅಂಚೆ ಮತಪತ್ರಗಳು ಸ್ವೀಕೃತವಾಗಿದ್ದು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲು 12 ಎಣಿಕೆ ಟೇಬಲ್‍ಗಳನ್ನು ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ ಪ್ರತಿ ಟೇಬಲ್‍ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
565 ಸೇವಾ ಮತದಾರರು; 565 ಸೇವಾ ಮತದಾರರಿಗೆ ಇ.ಟಿ.ಪಿ.ಬಿ.ಎಂ.ಎಸ್. ತಂತ್ರಾಂಶದ ಮೂಲಕ ಮತಪತ್ರಗಳನ್ನು ಕಳುಹಿಸಲಾಗಿದ್ದು ಮೇ ಅಂತ್ಯದವರೆಗೆ 298 ಮತಗಳು ಸ್ವೀಕೃತವಾಗಿವೆ. ಇವುಗಳನ್ನು ಸ್ವೀಕರಿಸಲು ಎಣಿಕೆ ದಿನ ಬೆಳಗ್ಗೆ 7.59 ಸಮಯದವರೆಗೆ ಸ್ವೀಕೃತವಾಗುವ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಇದನ್ನು ಎಣಿಕೆ ಮಾಡಲು 1 ಟೇಬಲ್ ಸ್ಥಾಪನೆ ಮಾಡಿ 4 ಜನ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಮತಗಟ್ಟೆಗಳು, ಎಣಿಕೆ ಸುತ್ತುಗಳು; ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಟೇಬಲ್‍ಗಳಿರಲಿದ್ದು ಪ್ರತಿ ಸುತ್ತಿಗೂ 14 ಮತಗಟ್ಟೆಗಳ ಎಣಿಕೆ ಕ್ರಮವಾಗಿ ನಡೆಯಲಿದ್ದು ಮತಗಟ್ಟೆಗಳ ಸಂಖ್ಯೆಯನ್ನಾಧರಿಸಿ ಸುತ್ತುಗಳು ನಿಗದಿಯಾಗಲಿದೆ. ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿವೆ. ಜಗಳೂರು 263 ಮತಗಟ್ಟೆ 19 ಸುತ್ತು, ಹರಪನಹಳ್ಳಿ 253 ಮತಗಟ್ಟೆ 19 ಸುತ್ತು, ಹರಿಹರ 228 ಮತಗಟ್ಟೆಗಳು 16 ಸುತ್ತು, ದಾವಣಗೆರೆ ಉತ್ತರ 245 ಮತಗಟ್ಟೆಗಳು 18 ಸುತ್ತು, ದಾವಣಗೆರೆ ದಕ್ಷಿಣ 217 ಮತಗಟ್ಟೆಗಳು 16 ಸುತ್ತು, ಮಾಯಕೊಂಡ 240 ಮತಗಟ್ಟೆಗಳು 18 ಸುತ್ತು, ಚನ್ನಗಿರಿ 255 ಮತಗಟ್ಟೆ ಗಳು 19 ಸುತ್ತು, ಹೊನ್ನಾಳಿ 245 ಮತಗಟ್ಟೆಗಳ ಎಣಿಕೆ 18 ಸುತ್ತುಗಳಲ್ಲಿ ನಡೆಯಲಿದೆ. ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳು ಹಾಗೂ ನೋಟಾ ಸೇರಿ 31 ಕ್ರಮಾಂಕಗಳನ್ನು ನೋಡಬೇಕಾಗಿರುವುದರಿಂದ ಎಣಿಕೆ ಮುಕ್ತಾಯದ ಅವಧಿ ಹೆಚ್ಚಳವಾಗಬಹುದು.
ಶೇ 76.98 ರಷ್ಟು ಮತದಾನ; ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಸೇರಿ 1709244 ಮತದಾರರಲ್ಲಿ ಮೇ 7 ರಂದು ನಡೆದ ಮತದಾನದಲ್ಲಿ 667742 ಪುರುಷ, 647964 ಮಹಿಳೆಯರು ಹಾಗೂ 40 ಇತರೆ ಸೇರಿ 1315746 ಮತದಾರರು ಮತಚಲಾಯಿಸಿ ಶೇ 76.98 ರಷ್ಟು ಮತದಾನವಾಗಿರುತ್ತದೆ.
ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ; ಮತ ಎಣಿಕೆ ಕೇಂದ್ರದ ಸುತ್ತಮುತ್ತ ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸಲಾಗಿದ್ದು ಮೊದಲ ಹಂತದಲ್ಲಿ ಕೇಂದ್ರ ಸಶಸ್ತ್ರ ಮೀಲಸು ಪೊಲೀಸ್ ಪಡೆ, ಎರಡನೇ ಹಂತದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಮೂರನೇ ಹಂತದಲ್ಲಿ ಸಿವಿಲ್ ಪೊಲೀಸ್ ವ್ಯವಸ್ಥೆಯಿಂದ ಭದ್ರತೆ ಒದಗಿಸಲಾಗಿದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರು, ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗಿದ್ದು ಗುರುತಿನ ಚೀಟಿ ಇಲ್ಲದ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ.
ಮೊಬೈಲ್ ನಿಷೇಧ
ಎಣಿಕೆ ಕೇಂದ್ರದೊಳಗೆ ಅನುಮತಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಯಾರಿಗೂ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ತರಲು ಅವಕಾಶ ಇರುವುದಿಲ್ಲ. ಮತ್ತು ಎಣಿಕೆ ಕೇಂದ್ರದೊಳಗೆ ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮತ್ತು ಆಯುಧ, ಬೆಂಕಿಪಟ್ಟಣ, ಲೈಟರ್, ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮೂರು ಹಂತದಲ್ಲಿ ಚೆಕ್ ಮಾಡುವ ಮೂಲಕ ಏಜೆಂಟರು ಹಾಗೂ ಇತರೆ ಸಿಬ್ಬಂದಿಗಳನ್ನು ಒಳಬಿಡಲಾಗುತ್ತದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರಾಗಿ ಆಗಮಿಸುವವರಿಗೆ ಪಾವತಿ ಆಧಾರದ ಮೇಲೆ ಉಪಹಾರ, ಶುದ್ದ ಕುಡಿಯುವ ನೀರು, ಲಸ್ಸಿ, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು ಅವರಿಗೆ ಎಷ್ಟು ಅಗತ್ಯವಿದೆ ಅಷ್ಟು ಕೂಪನ್‍ಗಳನ್ನು ಪಡೆಯಬಹುದಾಗಿದೆ ಎಂದರು.
ಸಾರ್ವಜನಿಕರಿಗೆ ಫಲಿತಾಂಶ ವಿವರ ಲಭ್ಯ; ಪ್ರತಿ ಸುತ್ತಿನ ಎಣಿಕೆ ನಂತರ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಣಿಕೆ ವಿವರವನ್ನು ಪ್ರಚಾರ ಮಾಡಲಾಗುತ್ತದೆ. ಸಾರ್ವಜನಿಕರು ಸೇರಿದಂತೆ ಪಕ್ಷಗಳ ಕಾರ್ಯಕರ್ತರು ತಾಳ್ಮೆಯನ್ನು ವಹಿಸುವ ಮೂಲಕ ಸಹಕಾರ ನೀಡಬೇಕೆಂದರು.
ನಿಷೇಧಾಜ್ಞೆ ಜಾರಿ; ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಕ್ರಮ ಗುಂಪು ಸೇರುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಣೆ ಮಾಡುವಂತಿಲ್ಲ ಎಂದರು.
ಮದ್ಯ ಮಾರಾಟ ನಿಷೇಧ; ಮತ ಎಣಿಕೆ ದಿನ ಕಾನೂನು ಸುವ್ಯವಸ್ಥೆ ಕಾಪಾಡಲು ಜೂನ್ 4 ರಂದು ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಬಿಗಿ ಬಂದೋಬಸ್ತ್; ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಎಣಿಕೆ ದಿನ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಣಿಕೆ ಕೇಂದ್ರದೊಳಗೆ ಹೋಗಲು ಮೂರು ಹಂತದ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಎಲ್ಲಾ ಕಡೆ ಬ್ಯಾರಿಕೇಡಿಂಗ್ ವ್ಯವಸ್ಥೆ ಇದ್ದು ಏಜೆಂಟರು, ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದೊಳಗೆ ಪ್ರವೇಶ ಮಾಡುವವರಿಗೆ ಅನುಮತಿಸಲಾದ ಗುರುತಿನ ಚೀಟಿಯ ಪ್ರದರ್ಶನ ಮಾಡಿ ಒಳಗೆ ಹೋಗಬೇಕು, ಪ್ರವೇಶಪತ್ರ ಇಲ್ಲದವರಿಗೆ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ ಎಂದರು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, 2019 ರ ಲೋಕಸಭಾ ಚುನಾವಣಾ ಮತದಾನಕ್ಕಿಂತ 2024 ರಲ್ಲಿ ಶೇ 4 ರಷ್ಟು ಮತದಾನ ಹೆಚ್ಚಳವಾಗಿದೆ. ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿಯಿಂದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಉಪಸ್ಥಿತರಿದ್ದರು.