ದಾವಣಗೆರೆ (Davanagere): ಅನಾರೋಗ್ಯದ ನಿಮಿತ್ತ ಭಾನುವಾರ ನಿಧನರಾದ ಹಿರಿಯ ಪತ್ರಕರ್ತ, ಇಂದಿನ ಸುದ್ದಿ ದಿನಪತ್ರಿಕೆಯ ಸಂಪಾದಕರಾದ ವೀರಪ್ಪ ಎಂ.ಭಾವಿ ಅವರ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್, ಯಾವುದೇ ಉತ್ತಮ ವರದಿಗಳು ಇರಲಿ. ಅವುಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದ ವ್ಯಕ್ತಿ ವೀರಪ್ಪ ಭಾವಿ ಅವರದು. ಸಾಮಾಜಿಕ ಕಳಕಳಿಯ ಜೊತೆ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ವ್ಯಕ್ತಿತ್ವ ಅವರದು. ಅವರ ಅಗಲಿಕೆ ದಾವಣಗೆರೆ ಪತ್ರಕರ್ತರಿಗೆ ತುಂಬಲಾರದ ನಷ್ಟವಾಗಿದೆ. ಅವರ ಮಾರ್ಗದರ್ಶನ ಇಂದಿನ ಪತ್ರಕರ್ತರಿಗೆ ಅಗತ್ಯವಿತ್ತು. ಮಾಹಿತಿ ಹಂಚಿಕೊಳ್ಳುತ್ತಿದ್ದ, ಪಡೆಯುತ್ತಿದ್ದ ವ್ಯಕ್ತಿ ಅವರು ಎಂದು ಸ್ಮರಿಸಿದರು.
ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ್ ಮಾತನಾಡಿ, ವೀರಪ್ಪ ಭಾವಿ ಅವರ ಕೆಲವು ಮಾರ್ಗದರ್ಶನಗಳು ಅಂದಿನ ನಗರಸಭೆಯ ಆಡಳಿತಾತ್ಮಕ ಬದಲಾವಣೆಗೆ ಕಾರಣ ಆಗಿದ್ದವು. ಯಾವುದೇ ತನಿಖಾ ವರದಿಗಳಿರಲಿ ಅವರಿಂದ ಸಹಕಾರ ಸಿಗುತ್ತಿತ್ತು. ಸಮಗ್ರ ಮಾಹಿತಿ ನೀಡುವ ಮೂಲಕ ಪತ್ರಿಕಾ ವೃತ್ತಿಯಲ್ಲಿ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು ಸಾರ್ವಜನಿಕರಿಗೆ ಉಪಯೋಗ ಆಗುವಂತಹ, ಜನಪರ ವರದಿಗಳು ಮಾಡಬೇಕು. ಆ ಮೂಲಕ ವರದಿಗಳು ಸಾರ್ವಜನಿಕ ಜೀವನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆನ್ನುವ ತುಡಿತ ಹೊಂದಿದ್ದರು ಎಂದು ಹೇಳಿದರು.
ದಾವಣಗೆರೆ ಟೈಮ್ಸ್ ಸಂಪಾದಕ ಜಿ.ಎಸ್.ವೀರೇಶ್ ಮಾತನಾಡಿ, ನಮ್ಮ ಪತ್ರಿಕೆ ನಡೆಸುವಲ್ಲಿ ದಾರಿ ತೋರಿಸಿ, ಪತ್ರಿಕೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆನ್ನುವುದನ್ನು ತೋರಿಸಿಕೊಟ್ಟು, ನಮ್ಮಲ್ಲಿ ಭರವಸೆ ತುಂಬಿ ಮಾರ್ಗದರ್ಶನ ನೀಡಿ ಪತ್ರಿಕಾ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಕಾರಣರಾದ ವ್ಯಕ್ತಿ ವೀರಪ್ಪ ಭಾವಿ ಅವರದ್ದು ಎಂದರು.
ವಿಜಯವಾಣಿಯ ಹಿರಿಯ ಪತ್ರಕರ್ತ ರಮೇಶ್ ಜಹಗೀರ್‍ದಾರ್ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಪತ್ರಕರ್ತರ ನಡುವೆ ಬಾಂಧವ್ಯ ಕಡಿಮೆ ಆಗಿದೆ. ವೇಗದ ಕಾಲದಲ್ಲಿ ಎಲ್ಲವೂ ಬದಲಾವಣೆ ಆಗಿದೆ. ಯಾವುದೇ ವ್ಯಕ್ತಿಯಾಗಲೀ ಗೌರವದಿಂದ ಕಾಣುವ ವ್ಯಕ್ತಿತ್ವ ವೀರಪ್ಪ ಭಾವಿ ಅವರದ್ದು, ಓರ್ವ ಕ್ರಿಯಾಶೀಲ ವ್ಯಕ್ತಿಯನ್ನು ದಾವಣಗೆರೆ ಪತ್ರಿಕಾ ರಂಗ ಕಳೆದುಕೊಂಡಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್ ಮಾತನಾಡಿ, ವೀರಪ್ಪ ಭಾವಿ ಅವರ ಅಕಾಲಿಕ ಅಗಲಿಕೆ ನಮ್ಮೆಲ್ಲರಿಗೆ ತುಂಬಲಾರದ ನಷ್ಟವಾಗಿದೆ. ಪತ್ರಿಕಾ ರಂಗಕ್ಕೆ ಯಾರೇ ಹೊಸದಾಗಿ ಬರಲಿ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಮೂಲಕ ನೈತಿಕ ಬೆಂಬಲ ನೀಡುತ್ತಿದ್ದ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು.
ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಏಕಬೋಟೆ ಮಂಜುನಾಥ್ ಮಾತನಾಡಿ, ಹಿಂದಿನ ಕಾಲಕ ಅಚ್ಚುಮೊಳೆ ಕಾಲದಿಂದಲೂ ಬಾಂಧವ್ಯ ಹೊಂದಿದ್ದ ವೀರಪ್ಪ ಭಾವಿ ಮತ್ತು ನಮ್ಮ ಬಾಂಧವ್ಯ ಇಂದಿನ ಆಧುನಿಕ ಕಾಲದ ತಂತ್ರಜ್ಞಾನದವರೆಗೂ ಅದೇ ರೀತಿ ಮುಂದುವರೆದುಕೊಂಡು ಬಂದಿದೆ. ಪತ್ರಿಕೆಯನ್ನು ಯಾವ ರೀತಿ ನಡೆಸಬೇಕೆನ್ನುವ ತಿಳಿಸಿಕೊಟ್ಟ ವ್ಯಕ್ತಿ ಎಂದು ಹೇಳಿದರು.
ಶ್ರದ್ದಾಂಜಲಿ ಸಭೆಯಲ್ಲಿ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ಖಜಾಂಚಿ ಈ.ಪವನ್‍ಕುಮಾರ್, ಪದಾಧಿಕಾರಿಗಳಾದ ರವಿಬಾಬು, ಬಿ.ಸಿಕಂದರ್, ತೇಜಸ್ವಿ ಪ್ರಕಾಶ್, ದೇವಿಕಾ ಸುನೀಲ್, ಐ.ಗುರುಶಾಂತಪ್ಪ, ಬಿ.ರಾಮಮೂರ್ತಿ, ಸುರೇಶ್ ಕುಣಿಬೆಳಕೆರೆ, ಚನ್ನಬಸವ ಶೀಲವಂತ್, ಪಿ.ಎಸ್.ಲೋಕೇಶ್, ಬಸವರಾಜ್ ದೊಡ್ಮನಿ, ಮಹಾದೇವ, ಜಿಗಳಿ ಪ್ರಕಾಶ್, ಡಿ.ನೂರುಲ್ಲಾ, ಶಿವರಾಜ್ ಈಳೀಗೇರ, ಸಂಜಯ್, ಪರಶುರಾಮ ಇತರರು ಇದ್ದರು.
Read also : Davanagere | ನ. 6 ರಂದು ದಾವಣಗೆರೆಯಲ್ಲಿ ವಿದ್ಯುತ್ ವ್ಯತ್ಯಯ