ದಾವಣಗೆರೆ (Davanagere) : ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡ ಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಮಹಾನಗರ ಪಾಲಿಕೆ ಅವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಇದೇ ನ.27 ರಿಂದ 30 ರವರೆಗೆ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮೇಯರ್ ಚಮನಸಾಬ್ ತಿಳಿಸಿದರು.
ಪಾಲಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.27 ರಂದು 10 ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳಿಸಿದ ಮತ್ತು ಪಿಯುಸಿಯಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಭಿನಂದಿಸುವರು. ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಲುಮನೆ, ಉರ್ ಬಾನು, ಆಶಾ ಡಿ.ಎಸ್., ಸುಧಾ ಮಂಜುನಾಥ ಇಟ್ಟಿಗುಡಿ ಹಾಗೂ ವಿಪಕ್ಷ ನಾಯಕ ಪ್ರಸನ್ನಕುಮಾರ್, ಆಯುಕ್ತೆ ರೇಣುಕಾ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ದಿ.ಕಂಚಿಕೇರಿ ಶಿವಣ್ಣನವರ ಶ್ರೀ ಜಯಲಕ್ಷ್ಮ ನಾಟಕ ಸಂಘದಿಂದ ಕನ್ನಡ ನಾಟಕೋತ್ಸವ ಆಯೋಜಿಸಲಾಗಿದೆ. ಮುದುಕನ ಮದುವೆ, ಕಳ್ಳ ಗುರು ಸುಳ್ಳ ಶಿಷ್ಯ, ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನಗೊಳ್ಳಲಿವೆ.
ನ.28 ರಂದು ಬೆಳಗ್ಗೆ 9.30 ಕ್ಕೆ ಪಾಲಿಕೆ ಅವರಣದಲ್ಲಿ ಕನ್ನಡ ಧ್ವಜಾರೋಹಣ ಮೇಯರ್ ಚಮನಸಾಬ್ ಮಾಡುವರು. ಪಾಲಿಕೆಯ ಅವರಣದಿಂದ ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ಮೆರವಣೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಮಂಗಳೂರಿನ ವಿಶ್ವಪರ್ಯಟನಾಗಾರ ಮಹಮದ್ ಸಿನಾನ್, ಸೇರಿದಂತೆ ಉಪಮೇಯರ್ , ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತೆ ರೇಣುಕಾ, ವಿಪಕ್ಷ ನಾಯಕ ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಭಾಗವಹಿಸುವರು.
ಸಂಜೆ ಕಾರ್ಯಕ್ರಮದ ಉದ್ಘಾಟನೆ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು, ಸಾನಿಧ್ಯವನ್ನು ಹೆಬ್ಬಾಳ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿಜೀ, ಮುಸ್ಲಿಂ ಧರ್ಮ ಗುರು ಜೈನೀ ಕಾಮಿಲ್ ಸಖಾಫಿ, ಕ್ರೈಸ್ತ ಧರ್ಮಗುರು ಆಂಟೋನಿ ನಜರತ್ ಸಾನಿಧ್ಯ ವಹಿಸುವರು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿಶೇಷ ಉಪನ್ಯಾಸ ನೀಡುವರು. ಶಾಸಕ ಕೆ.ಎಸ್.ಬಸವಂತಪ್ಪ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಹಾಸ್ಯ ನಟ ಸಾಧುಕೋಕಿಲ, ಕನ್ನಡ ಪರ ಸಂಘಟನೆಗಳ ಕೆ.ಜಿ.ಯಲ್ಲಪ್ಪ, ಅವಿನಾಶ, ನಾಗೇಂದ್ರ ಬಂಡಿಕರ್, ಎನ್.ಹೆಚ್.ಹಾಲೇಶ್, ದ್ರಾಕ್ಷಾಯಣಮ್ಮ ಮಲ್ಲಿಕಾರ್ಜುನಯ್ಯ, ಸುವರ್ಣಮ್ಮ ಸೇರಿದಂತೆ ಇತರರು ಉಪಸ್ಥಿತರಿರುವವರು.
ಭಾರತಿ ಮ್ಯೂಸಿಕಲ್ ನೈಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ. ರಾತ್ರಿ 8 ಕ್ಕೆ ಸಾಧಕೋಕಿಲ ಮತ್ತು ಗಿಚ್ಚಿಗಿಲಿಗಿಲಿ ತಂಡದಿಂದ ಗೂಬ್ರಗಾಲ ಮಂಜು ಮತ್ತು ಜಗ್ಗಪ್ಪ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ನ.29 ಸಂಜೆ 5.30 ರ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು.ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಉಪನ್ಯಾಸ ನೀಡುವರು. ಅತಿಥಿಗಳಾಗಿ ಎಸ್ಪಿ ಉಮಾಪ್ರಶಾಂತ, ಪತ್ರಕರ್ತರಾದ ಬಸವರಾಜ ದೊಡ್ಮನಿ, ತೇಜಸ್ವಿನಿ , ಕನ್ನಡ ಪರ ಸಂಘಟನೆಯ ಎಂ.ಎಸ್.ರಾಮೇಗೌಡ, ಜಮ್ಮಳ್ಳಿ ನಾಗರಾಜ, ಶಾಂತಮ್ಮ ಇತರರು ಭಾಗವಹಿಸವರು.
ಜಾಂಬೆ ಬಾಲು ತಂಡದವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜಾಂಬೆ ಜಲಕ್ ಜಾನಪದ ಗೀತೆಗಳು. ಸಂಗೀತ ಕಟ್ಟಿ ತಂಡದಿಂದ ಕರ್ನಾಟಕ ಗೀತ ವೈಭವ ಮತ್ತು ಜೂನಿಯರ್ ವಿಷ್ಣುವರ್ಧನ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ ಎಂದರು.
ನ.30 ರ 5.30 ಸಂಜೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಉದ್ಘಾಟಿಸುವರು. ದಾವಣಗೆರೆ ನಗರದ ಅಮೃತ ಪುರುಷರಾದ ಶಾಸಕ ಶಾಮನೂರು ಶಿವಶಂಕರಪ್ಪ, ದಾನಿಗಳಾದ ಚನ್ನಗಿರಿ ವಿರುಪಾಕ್ಷಪ್ಪ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಡಾ.ಎಂ.ಎಸ್.ಎಲಿ, ರೈತ ಹೋರಾಟಗಾರ ನರಸಿಂಹಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕೆ.ಇಮಾಂ ಅವರಿಗೆ ನಾಗರೀಕ ಪೌರ ಸನ್ಮಾನ ನಡೆಯಲಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜ, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ನಟ ಡಾಲಿ ಧನಂಜಯ, ಜಿಲ್ಲಾ ಕಾ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕನ್ನಡ ಪರ ಸಂಘಟನೆಗಳ ಟಿ.ಶಿವಕುಮಾರ್, ಕೆ.ಜಿ.ಶಿವಕುಮಾರ್, ಮಂಜುಳಾ ಜಿ ಭಾಗವಹಿಸವರು.
ನ.28 ಮತ್ತು 29 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಅಂತರಾಷ್ಟ್ರೀಯ ಕ್ರೀಡಾಪಟು ಜೆ.ಎನ್.ಶ್ರೀನಿವಾಸ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ. ಕಾರ್ಯಕ್ರಮದ ನಂತರ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಲುಮನೆ, ಉರ್ ಬಾನು, ಆಶಾ ಡಿ.ಎಸ್., ಸುಧಾ ಮಂಜುನಾಥ ಇಟ್ಟಿಗುಡಿ, ಪಾಲಿಕೆ ಸದಸ್ಯ ಎ.ನಾಗರಾಜ, ಗಡಿಗುಡಾಳ ಮಂಜುನಾಥ ಇತರರು ಇದ್ದರು.
Read also : Davangere | ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಪ್ರಯತ್ನದಿಂದ ಮೂರು ಕ್ಷೇತ್ರಗಳಲ್ಲಿ ಗೆಲವು