ದಾವಣಗೆರೆ (Davanagere) ಜ.6: ಯುವ ಜನತೆ ದೇಶದ ಶಕ್ತಿ, ದೇಶದ ಭವಿಷ್ಯ ಯುವಕರ ಕೈಯಲಿದೆ. ಚುನಾವಣೆಯಲ್ಲಿ ಒಮ್ಮೆ ಓಟು ಮಾಡಿದರೆ ಸಾಲದು, ಐದು ವರ್ಷ ಸರ್ಕಾರ ರೂಪಿಸುವ ನೀತಿ ನಿರೂಪಣೆ ಹಾಗೂ ಜನಪ್ರತಿನಿಧಿಗಳ ಕಾರ್ಯಗಳನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ದೃಷ್ಟಿಕೋನ ಬೆಳಸಿಕೊಳ್ಳಬೇಕು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ಬಿ.ಐ.ಇ.ಟಿ ಕಾಲೇಜಿನ ಎಸ್.ಎಸ್.ಎಂ ಸಾಂಸ್ಕøತಿಕ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂವಿಧಾನ ನಮಗೆ ಹಕ್ಕು ನೀಡಿದೆ. ಬರೀ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಸಾಲದು, ಕರ್ತವ್ಯಗಳನ್ನು ಸಹ ಯುವಕರು ತಿಳಿದುಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿ ನಿರೂಪಣೆಯನ್ನು ವಿಮರ್ಶಾತ್ಮಕವಾಗಿ ನೋಡಬೇಕು. ಈ ಹಿನ್ನಲೆಯಲ್ಲಿ ದೇಶದ ಸಂವಿಧಾನವನ್ನು ಪರಿಚಯಿಸುವ ದೃಷ್ಟಿಯಿಂದ KYC (Know your constitution) ಎನ್ನುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಗಿದೆ ಎಂದರು.
ಯುವಜನತೆ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿ ಅರಿತು ನಡೆಯಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಯುವಜನೋತ್ಸವದ ಯಶಸ್ವಿಗಾಗಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಸಂಸದರು ಧನ್ಯವಾದ ತಿಳಿಸಿದರು.
ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ, ಯುವಜನೋತ್ಸವದಲ್ಲಿ ವಿಜೇತರಾದ ಕಲಾ ತಂಡಗಳಿಗೆ ರೂ. 1 ಲಕ್ಷ ಬಹುಮಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್, ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್ ಮಾತನಾಡಿದರು.
ಯುವಜನೋತ್ಸವದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಯುವ ಪುರಸ್ಕøತರಿಗೆ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯಮಟ್ಟದ ಯುವಜನೋತ್ಸವದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಲಾಯಿತು.
ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗನಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿ.ಪಂ.ಸಿಇಓ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜನಪದ ಗೀತಗಾಯಕ ಅಪ್ಪಿಗೆರೆ ತಿಮ್ಮರಾಜು ಉಪಸ್ಥಿತಿದ್ದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತಾಂಜಾವೂರಿನ ದಕ್ಷಿಣ ಸಾಂಸ್ಕøತಿಕ ಕೇಂದ್ರದಿಂದ ಆಗಮಿಸಿದ ಕಲಾವಿದರು ದಕ್ಷಿಣ ಭಾಗದ ಕೇರಳದ ಮಾರಿಥೈಯಂ ನೃತ್ಯ ಪ್ರದರ್ಶಿಸಿದರು.
ಪಂಜಾಬ್ ರಾಜ್ಯದಿಂದ ಆಗಮಿಸಿದ ತಂಡ ಪ್ರಸಿದ್ದ ಬಾಂಗ್ಡ ಹಾಗೂ ಮಹಾರಾಷ್ಟ್ರದ ಮುಂಬೈನಿಂದ ಆಗಮಸಿದ ಮರಾಠಿ ತಂಡ ಲಾವಣಿ ನೃತ್ಯದ ಮೂಲಕ ಜನಮನ ಸೂರೆಗೊಳಿಸಿದರು. ಮಧ್ಯಪ್ರದೇಶದ ಬದಾಯಿ ಹಾಗೂ ದಾವಣಗೆರೆ ಕಲಾ ತಂಡ ಕಂಸಾಳೆ ನೃತ್ಯ ಪ್ರದರ್ಶಿಸಿದರು.
Read also : ನಾ.ಡಿಸೋಜರವರು ನಾಡು ಕಂಡ ಒಬ್ಬ ಪರಿಪೂರ್ಣ ಸಾಹಿತಿ : ಬಿ.ವಾಮದೇವಪ್ಪ