ದಾವಣಗೆರೆ (Davanagere): ಸಂವಿಧಾನಿಕ ಹಕ್ಕುಗಳ, ಧಾರ್ಮಿಕ ಹಕ್ಕುಗಳ ರಕ್ಷಣೆಗಾಗಿ 2024ರ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ವಿರೋಧ ವ್ಯಕ್ತಪಡಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟ ದಾವಣಗೆರೆ ನಗರದ ಪಿ.ಬಿ. ರಸ್ತೆಯ ಮದೀನಾ ಮಸ್ಜಿದ್ ಮುಂಬಾಗ ಶಾಂತಿಯುತ ಪ್ರತಿಭಟನೆ ನಡೆಯಿತು.
ವಕ್ಫ್ ತಿದ್ದುಪಡಿ ಮಸೂದೆ- 2024 ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ತಾಹೀರ್ ಸಮೀರ್ ಮಾತನಾಡಿ, “ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಹಕ್ಕುಗಳ ಮೇಲೆ ನೇರ ಹಲ್ಲೆಯಾಗಿದ್ದು, ವಕ್ಫ್ ಆಸ್ತಿಗಳ ಮೇಲಿನ ಸಮುದಾಯದ ಹಕ್ಕನ್ನು ಕಿತ್ತೆಸೆಯುವ ಪ್ರಯತ್ನವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ತಿದ್ದುಪಡಿ ಭಾರತ ಸಂವಿಧಾನ ಕೊಟ್ಟಿರುವ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸಂವಿಧಾನವು ಧರ್ಮವನ್ನು ಆಚರಿಸುವ, ಪಾಲನೆ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕು ನೀಡುತ್ತದೆ. ಧಾರ್ಮಿಕ ಸಂಸ್ಥೆಗಳಿಗೆ ಸ್ವತಂತ್ರವಾಗಿ ನಿರ್ವಹಣೆಯ ಹಕ್ಕು ನೀಡುತ್ತದೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆಯ ಹಕ್ಕು ಒದಗಿಸುತ್ತದೆ. ವಕ್ಫ್ ತಿದ್ದುಪಡಿಯಲ್ಲಿ ಇದರ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದರು.
ಇದು ಕೇವಲ ಕಾನೂನು ತಿದ್ದುಪಡಿ ಅಲ್ಲ, ಇದು ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ವಿರುದ್ಧದ ಕದನವಾಗಿದೆ’ ಎಂದ ಪ್ರತಿಭಟನಾಕಾರರು, ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.
Read also : JOB NEWS | ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಪ್ರತಿಭಟನೆಯಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಶೋಯಬ್ ಅಹ್ಮದ್, ಸಯ್ಯದ್ ಅಹ್ಮದ್, ಖಮರ್ ಅಲಿ, ಸಯ್ಯದ್ ತಾಹಿರ್, ಗೌಸ್, ಮೊಇನುದ್ದೀನ್, ಶಾನವಾಜ್, ನದೀಮ್, ಕಬೀರ್ ಲಾಲ್, ಅಹ್ಮದ್ ಅಲಿ ಮತ್ತು ರಹೀಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.