ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ದಾವಣಗೆರೆ ನೂತನ ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದಾವಣಗೆರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದರು, ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗ 182 ಕಿಲೋಮೀಟರ್ ಇರುವ (ರಾಜ್ಯ ಹೆದ್ದಾರಿ 25) ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಹಾದುಹೋಗಲಿದ್ದು, ವಿಜಯನಗರ, ದಾವಣಗೆರೆ, ಶಿವಮೊಗ್ಗ ಮೂರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು.
ಮರಿಯಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ 50 ಹಾಗೂ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 69 ಎರಡು ಹೆದ್ದಾರಿಗಳ ಸೇರಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ 44 ಕಿಲೋಮೀಟರ್ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ 37 ಕಿಲೋಮೀಟರ್, ಹೊನ್ನಳ್ಳಿ ತಾಲೂಕಿನ 31 ಕಿಲೋಮೀಟರ್ ಒಟ್ಟು 112 ಕಿಲೋಮೀಟರ್ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಈಗಾಗಲೇ ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.
2016ರಲ್ಲಿ 800 ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2023 ಕ್ಕೆ ಇದರ ವೆಚ್ಚ 2017 ಕೋಟಿಗೆ ಏರಿದ್ದು ಇದನ್ನು ಶೀಘ್ರವೇ ಅನುಮೋದನೆಗೆ ಮೊನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದ್ದು, ಈ ಯೋಜನೆಯಿಂದ ಸಾಮಾಜಿಕ ಹಾಗೂ ಆರ್ಥಿಕ ಬಲವರ್ಧನೆ ಆಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.
ಈ ಸಭೆಯಲ್ಲಿ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ನರೇಂದ್ರಬಾಬು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಮೂರ್ತಿ ಭಾಗವಹಿಸಿದ್ದರು.