ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ಕಂಪ್ಯೂಟರ್ ವಿಜ್ಞಾನ ವಿಭಾಗ, ಎಂಸಿಎ ಮತ್ತು ಎನ್‌ಎಸ್‌ಎಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಪರಿಸರ ದಿನವನ್ನು ಆಚರಿಸಲಾಯಿತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಮಾತನಾಡಿ, ಮನುಷ್ಯನ ಜೀವನ ಪರಿಸರದ ಜೊತೆಗೆ ಬೆಸೆದುಕೊಂಡಿದೆ. ಪರಿಸರ ರಕ್ಷಿಸದಿದ್ದರೆ ಭವಿಷ್ಯವೇ ಇಲ್ಲ. ಶುದ್ಧ ಗಾಳಿ, ನೀರು ಪಡೆಯಲು ಪರಿಸರ ಅತ್ಯಗತ್ಯ. ಆದ್ದರಿಂ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ವರ್ಷಕ್ಕೊಂದು ಗಿಡ ನೆಟ್ಟು ಬೆಳೆಸಿದರೆ ಪರಿಸರ ರಕ್ಷಣೆಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದರು.
ಭೂಮಿಯ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ. ಜಾಗತೀಕರಣದ ನಂತರ ಕೈಗಾರಿಕೀಕರಣ, ನಗರೀಕರಣ ಹೆಚ್ಚಾಗಿ ಮನುಷ್ಯನ ದುರಾಸೆಗೆ ಪರಿಸರ ನಾಶವಾಗುತ್ತಿದೆ. ಅದರ ಪರಿಣಾಮವನ್ನು ಮನುಕುಲ ಎದುರಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಸುನಾಮಿಯಂತಹ ಪ್ರಕೃತಿ ವಿಕೋಪಗಳನ್ನು ತಡೆಯಲು ಗಿಡ ನೆಟ್ಟು ಪರಿಸರ ಉಳಿಸುವುದೊಂದೇ ಪರಿಹಾರ ಮಾರ್ಗ ಎಂದು ತಿಳಿಸಿದರು.
ಕುಲಸಚಿವರ ಪ್ರೊ.ಯು.ಬಿ.ಮಹಾಬಲೇಶ್ವರ ಮಾತನಾಡಿ, ಪರಿಸರವು ಮನುಕುಲದ ರಕ್ಷಕ. ಉತ್ತಮ ಪರಿಸರವನ್ನು ಕಾಪಾಡಲು ವಿದ್ಯಾರ್ಥಿಗಳು ಗಮನ ನೀಡಿದರೆ, ಉದ್ದೇಶಿತ ಗುರಿ ಈಡೇರಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿಭಾಗ ಅಧ್ಯಕ್ಷ ಪ್ರೊ.ಚಂದ್ರಕಾಂತ ನಾಯ್ಕೊಡಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ, ಗಿಡ ನೆಟ್ಟರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಅಶೋಕಕುಮಾರ ಪಾಳೇದ ಸ್ವಾಗತಿಸಿದರು. ಎಂಸಿಎ ವಿಭಾಗದ ಅಧ್ಯಕ್ಷ ಪ್ರೊ.ಎಂ.ಬಸವಣ್ಣ ವಂದಿಸಿದರು.