ದಾವಣಗೆರೆ: ಸುಲಭದ ಉತ್ಪಾದನೆ, ಕಡಿಮೆ ದರ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವವೂ ಸಹ ಮನುಷ್ಯನ ಅಗತ್ಯಕ್ಕೆ ಮೀರಿದ ಖರೀದಿಗೆ ಪ್ರಚೋದನೆ ನೀಡಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಅಗತ್ಯಕ್ಕೆ ಮೀರಿದ ಸಂಗ್ರಹವೂ ಪರಿಸರಕ್ಕೆ ಅಪಾಯಕಾರಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮಿಕಾಂತ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಎನ್‌ಎಸ್‌ಎಸ್ ೧ ಮತ್ತು ೨ನೇ ಘಟಕಗಳು, ಪರಿಸರ ವಿಜ್ಞಾನ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
‘ಹೋಟೆಲ್‌ನಿಂದ ತರುವ ಪ್ಯಾಕೇಜ್ ಆಹಾರದ ಜೊತೆಗೆ ನಾವು ಕಸವನ್ನೂ ತರುತ್ತಿದ್ದೇವೆ. ಆಹಾರವನ್ನು ಪ್ಯಾಕ್ ಮಾಡುವ ಪ್ಲಾಸ್ಟಿಕ್, ಕಾಗದ ಹಾಗೂ ಇನ್ನಿತರ ವಸ್ತುಗಳ ಉತ್ಪಾದನೆಯು ಮಾಲಿನ್ಯದ ಅಡಿಪಾಯ. ಅನಗತ್ಯ ಉತ್ಪಾದನೆಗೆ ನಿಯಂತ್ರಣ ಹೇರಿದರೆ ಪರಿಸರದ ಮೇಲಿನ ದುಷ್ಪರಿಣಾಮಗಳೂ ಕಡಿಮೆಯಾಗುತ್ತವೆ’ ಎಂದು ಸಲಹೆ ನೀಡಿದರು.
ಪರಿಸರ ಜಾಗೃತಿಯ ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಿ ಪಾಲಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪರಿಸರ ಜಾಗೃತಿ ಬಗ್ಗೆ ಪ್ರತಿದಿನವೂ ಬೋಧನೆ ಮಾಡಲು, ಪಾಠ ಹೇಳಲು ಅಥವಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪರಿಸರ ಜಾಗೃತಿಗಾಗಿ ಒಂದು ದಿನವನ್ನು ನಿಗದಿಪಡಿಸಿ, ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಗಿಡ ನೆಟ್ಟು, ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನೂ ಕರ್ತವ್ಯವೆಂದು ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಎ.ಎಂ.ರೇಣುಕಾರಾಧ್ಯ ಮಾತನಾಡಿ, ಮಣ್ಣು, ನೀರು, ಗಾಳಿಯ ಮಾಲಿನ್ಯದಂತೆ ಇತ್ತೀಚೆಗೆ ಹೊಸ ಹೊಸ ಮಾಲಿನ್ಯಗಳು ಸೃಷ್ಟಿಯಾಗುತ್ತಿವೆ. ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯಗಳೂ ಪರಿಸರವನ್ನು ನಾಶ ಮಾಡುವ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಮುಂಜಾಗೃತೆ ವಹಿಸಿ ನಿಯಂತ್ರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದರು.
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಪ್ಲಾಸ್ಟಿಕ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಆದರೆ ಉತ್ಪಾದನೆಯನ್ನೇ ನಿಲ್ಲಿಸಲು ಸರ್ಕಾರಗಳಿಂದಾಗಲಿ, ಸಂಬAಧಿಸಿದ ೧೮ ಇಲಾಖೆಗಳಿಂದಲೂ ಸಾಧ್ಯವಾಗಿಲ್ಲ. ಸಮಸ್ಯೆಯ ಮೂಲದ ಬಗ್ಗೆ ಗೊತ್ತಿದ್ದೂ ನಿಯಂತ್ರಣ ಕ್ರಮ ಇಲ್ಲದ ಕಾರಣ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪ್ಲಾಸ್ಟಿಕ್‌ನಿಂದಾಗಿ ಇಡೀ ಜಗತ್ತು ಪರಿಸರದ ಅಸಮತೋಲನ ಎದುರಿಸುತ್ತಿದೆ. ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ಬಲಿಯಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಲಿನ್ಯ ಸೇರಿದಂತೆ ಇನ್ನಿತರ ಯಾವುದೇ ರೀತಿಯಲ್ಲಿ ಪರಿಸರವನ್ನು ಹಾನಿಗೀಡು ಮಾಡುವವರ ವಿರುದ್ಧ ಸರ್ಕಾರ ಮತ್ತು ಪರಿಸರ ಇಲಾಖೆಗಳು ಕಠಿಣ ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯ. ಇಲ್ಲವಾದರೆ ಪರಿಸರ ಸಂಪೂರ್ಣ ನಾಶವಾಗಿ ಮನುಕುಲವು ಸಂಕಷ್ಟಕ್ಕೀಡಾಗುವುದನ್ನು ಯಾರಿದಂಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ, ಹಣಕಾಸು ಅಧಿಕಾರಿ ಮುದ್ದನಗೌಡ ದ್ಯಾಮನಗೌಡ್ರ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ, ಪರಿಸರ ವಿಜ್ಞಾನ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಎನ್.ಎಸ್.ಪ್ರಮೋದ ಉಪಸ್ಥಿತರಿದ್ದರು. ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ.ವೀರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸೌಮ್ಯ ಎಸ್.ಬುಳ್ಳಾ ಸ್ವಾಗತಿಸಿದರು.
ಡಾ.ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.