ದಾವಣಗೆರೆ: ಸಾಮಾಜಿಕ ಸಂಬಂಧಗಳ ಮಹತ್ವ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಕನಾಟಕ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಎನ್.ಎಸ್.ಎಸ್. ಯುವಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಮಯಪಾಲನೆ, ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವುದು. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಜೊತೆಗೆ ಸ್ನೇಹ, ವಿಶ್ವಾಸಾರ್ಹತೆ ಮತ್ತು ಬಾಂಧವ್ಯವನ್ನು ಬೆಸೆಯಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಕಾಯಕ, ಮನಸ್ಸು ಮತ್ತು ಹೃದಯದಿಂದ ಚಟುವಟಿಕೆ ನಡೆಸುವ ಸರ್ಕಾರದ ಪ್ರಾಯೋಜಿತ ಏಕೈಕ ಯುವ ಸಂಘಟನೆಯಾಗಿದೆ ಎಂದರು.
ಯುವಜನೋತ್ಸವವು ರಾಜ್ಯದ ಬೇರೆ ಬೇರೆ ಪ್ರದೇಶದ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಪರಿಚಯ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಎನ್‌ಎಸ್‌ಎಸ್‌ನಂತಹ ಪಠ್ಯೇತರ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಬದುಕನ್ನು ವಿಕಸನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಉತ್ತಮ ಅವಕಾಶಗಳನ್ನು ಪಡೆಯಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯುವಜನೋತ್ಸವದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ವೀ.ಪಾಳೇದ, ಶಿಬಿರಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವದ ಮೂಲಕ ತಮ್ಮಲ್ಲಿರುವ ಸಾಮರ್ಥ್ಯ ಪ್ರದರ್ಶನಕ್ಕೆ ಮಾತ್ರ ಸ್ಪರ್ಧೆಗಳು ನಡೆಯುತ್ತವೆ. ಆದರೆ ಎಲ್ಲ ವಿದ್ಯಾರ್ಥಿಗಳ ನಡುವೆ ಸೌಹಾರ್ದಯುತ ಸಂಬಂಧ ಬೆಸೆಯುವುದು, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ಪಿ.ಅಣ್ಣೇಶ, ಜಿ.ಮಂಜುನಾಥ, ಡಾ.ತಿಪ್ಪೇಸ್ವಾಮಿ, ಲೋಕೇಶ ನಾಯಕ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.