ದಾವಣಗೆರೆ (Davanagere): ವೃತ್ತಿ ನಿಷ್ಠೆ, ಪ್ರಾಮಾಣಿಕ ಕರ್ತವ್ಯ ಮತ್ತು ಜನಪರ ಕಾಳಜಿಯಿಂದ ಕೆಲಸ ಮಾಡುವುದೇ ದೇಶಕ್ಕೆ ನೀಡುವ ನಿಜವಾದ ಕೊಡುಗೆ. ಇದು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹಿರಿಯರಿಗೆ ಸಲ್ಲಿಸುವ ಗೌರವ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ ಡಿ ಕುಂಬಾರ ಅಭಿಪ್ರಾಯಪಟ್ಟರು.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ ಬೆಂಗಳೂರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಎನ್‌ಎಸ್‌ಎಸ್ ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕೆ ಬಲಿದಾನ ಮಾಡಿದ ಹಿರಿಯರ ಋಣ ನೆಮ್ಮೆಲ್ಲರ ಮೇಲಿದೆ. ಹೀಗಾಗಿ ದೇಶಕ್ಕಾಗಿ ಬದ್ಧತೆ, ಸಮರ್ಪಣಾ ಮನೋಭಾವ, ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನ ನೀಡುವಲ್ಲಿ ರಾಷ್ಟ್ರೀಯ ಸೇವಾ ಸಂಸ್ಥೆಯು ಅಪಾರ ಕೊಡುಗೆ ನೀಡಿದೆ. ರಾಷ್ಟ್ರೀಯ ಸ್ವಯಂ ಸೇವಕರು ಕೇವಲ ನಗರ ಮಟ್ಟಕ್ಕೆ ಸೀಮಿತವಾಗದೆ ಭಾರತದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮೂಲಕ ಉತ್ತಮ ನಾಯಕರಾಗಿ ಹೊರಹೊಮ್ಮಲು ಅವಕಾಶವಿದೆ ಅದನ್ನು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ, ನಾಯಕತ್ವ ಗುಣ, ಶಿಸ್ತು, ಸಂಯಮ ಬೆಳೆಸಿಕೊಂಡು ಸಮಾಜದಲ್ಲಿ ಇತರೆ ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮುವ ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ವೃತ್ತಿಕೌಶಲ್ಯ ಬಹಳ ಮುಖ್ಯ. ಅದನ್ನು ರೂಢಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಕರ್ತವ್ಯ ಪ್ರಜ್ಞೆ, ದೇಶಾಭಿಮಾನ ಜಾಗೃತವಾದಾಗ ಸ್ವಾಭಿಮಾನ ನೆಲೆಗೊಳ್ಳುತ್ತದೆ.ಆಗ ದೇಶ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
READ ALSO : Davanagere | ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಆರ್ಜಿ ಆಹ್ವಾನ
ದಾವಣಗೆರೆ ವಿಶ್ವವಿದ್ಯಾನಿದಲ್ಲಿ ಆಯೋಜಿಸಿರುವ ಹತ್ತು ದಿನದ ಶಿಬಿರದಲ್ಲಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ಪುದುಚರಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು ೨೦೦ ರಾಷ್ಟ್ರೀಯ ಸ್ವಯಂ ಸೇವಕ ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರಲ್ಲಿ ೪೦ ಸ್ವಯಂ ಸೇವಕರನ್ನು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಕಾರ್ತಿಗೆಯನ್ ಪ್ರಾದೇಶಿಕ ನಿರ್ದೇಶಕರು ಪ್ರಾದೇಶಿಕ ನಿರ್ದೇಶನಾಲಯ ಭಾರತ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಮಹಾಬಲೇಶ್ವರ ಯು.ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ.ಅಶೋಕ್‌ಕುಮಾರ್ ವಿ ಪಾಳೇದ ಉಪಸ್ಥಿತರಿದ್ದರು.